ಸ್ವಯಂನಿರೋಧಕ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದ ಸಂಶೋಧನೆಗೆ ಆದ್ಯತೆ ಅಗತ್ಯ: ಡಾ.ಮನಿಷಾ
‘ಕ್ಷಮತ್ವಂ-2026’ 6ನೇ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಉಡುಪಿ, ಸೆ.30: ಸ್ವಯಂ ನಿರೋಧಕ ಕಾಯಿಲೆಗಳ ನಿರ್ವಹಣೆಯಲ್ಲಿ ಆಯುರ್ವೇದದ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆ ಹಾಗೂ ಜಾಗತಿಕ ಆರೋಗ್ಯ ಸೇವೆಗಳೊಂದಿಗೆ ಸಂಯೋಜಿ ಸುವ ಅಗತ್ಯವಿದೆ ಎಂದು ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ ಅಧ್ಯಕ್ಷೆ ಪ್ರೊ.(ಡಾ.)ಮನಿಷಾ ಉಪೇಂದ್ರ ಕೊಥೇಕರ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ(ಎಸ್‌ಡಿಎಂ) ಆಯು ರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಭಾವಪ್ರಕಾಶ ಸಭಾಂಗಣದಲ್ಲಿ ಆಯೋಜಿಸಲಾದ ‘ಕ್ಷಮತ್ವಂ-2026’ ಆರನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಆಯುರ್ವೇದ ಸಂಸ್ಥೆಗಳ ನಿರ್ದೇಶಕ ಪ್ರೊ.ಡಾ.ಪ್ರಸನ್ನ ಎನ್.ರಾವ್ ಮಾತನಾಡಿ, ಕ್ಷಮತ್ವಂ-2026 ಒಂದು ಜಾಗತಿಕ ಉಪಕ್ರಮವಾಗಿದ್ದು, ವಿಶ್ವದ ವಿವಿಧ ಭಾಗಗಳಿಂದ ತಜ್ಞರು, ಸಂಶೋಧಕರು ಹಾಗೂ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಆಯುರ್ವೇದವನ್ನು ಜಾಗತಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಇಂತಹ ಅಂತಾರಾಷ್ಟ್ರೀಯ ವೇದಿಕೆಗಳು ಮಹತ್ವದ್ದಾಗಿವೆ ಎಂದರು.
ಭಾರತ ಸರಕಾರದ ಆಯುಷ್ ಸಚಿವಾಲಯದ ಆಯುರ್ವೇದ ಸಲಹೆಗಾರ ಡಾ.ಕೌಸ್ತುಭ್ ಉಪಾಧ್ಯಾಯ, ಕರ್ನಾಟಕ ಸರಕಾರದ ಆಯುಷ್ ಇಲಾಖೆಯ ಆಯುಕ್ತ ಡಾ.ಸುನಿಲ್ ಪನ್ವಾರ್, ಆಯುರ್ವೇದ ರಷ್ಯಾ-ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷೆ ಡಾ.ಅನಿತಾ ಕರಿಲಿಯೊ ಅರ್ಕಾಸ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ವಾಚಿಸಲಾಯಿತು. ಸಮ್ಮೇಳನದ ಅಂಗವಾಗಿ ಡಾ.ಪದ್ಮಕಿರಣ್ ಸಿ. ಅವರ ‘ಪಂಚಕರ್ಮ ಶ್ಲೋಕ ಮಂಜರಿ’ ಹಾಗೂ ಡಾ.ಅರ್ಹಂತ್ ಕುಮಾರ್ ಎ. ಅವರ ‘ಇಂಗ್ಲಿಷ್ ಟ್ರಾನ್ಸ್‌ಲೆಶನ್ ಆಫ್ ಸುಶ್ರೂತ ಸಂಹಿತಾ- ಪಾರ್ಟ್-1’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಪ್ರೊ.ಎಮೆರಿಟಸ್ ಡಾ. ಶ್ರೀನಿವಾಸ್ ಹೆಜಮಾಡಿ ಮಾತನಾಡಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿಗಳಾದ ಡಾ.ಪ್ರಸನ್ನ ಎನ್.ಮೊಗಸಾಲೆ ಹಾಗೂ ಡಾ.ಅರ್ಹಂತ್ ಕುಮಾರ್ ಎ. ಉಪಸ್ಥಿತರಿದ್ದರು.
ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಅಶೋಕ್ ಕುಮಾರ್ ಬಿ.ಎನ್. ವಂದಿಸಿದರು. ಡಾ.ಅರುಣ್ ಹಾಗೂ ಡಾ.ಶುಭಾ ಪಿ.ಯು. ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂ ಕಲಾವೈಭವ ತಂಡ ದಿಂದ ನಡೆದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮೆರುಗು ನೀಡಿತು.
ವೈಜ್ಞಾನಿಕ ಗೋಷ್ಠಿಗಳು: ಬಳಿಕ ನಡೆದ ವೈಜ್ಞಾನಿಕ ಗೋಷ್ಠಿಗಳಲ್ಲಿ ದೇಶ-ವಿದೇಶಗಳ ಖ್ಯಾತ ತಜ್ಞರು ಭಾಗವಹಿಸಿ ವಿವಿಧ ಆಯಾಮಗಳ ಕುರಿತು ವಿಚಾರ ಮಂಡಿಸಿದರು. ಡಾ. ವಿಶ್ವೇಶ್ವರಯ್ಯ ಪ್ರಕಾಶ್, ಡಾ.ಭೂಷಣ್ ಪಾಟವರ್ಧನ್, ಡಾ.ಜಾರ್ಜ್ ಲೂಯಿಸ್ ಬೆರಾರ್, ಡಾ.ರಾಮಮನೋಹರ್ ಹಾಗೂ ಡಾ.ಪ್ರಸನ್ನ ಎನ್. ಮೊಗಸಾಲೆ ಉಪನ್ಯಾಸ ನೀಡಿದರು.
ಎಸ್‌ಡಿಎಂ ಆಯುರ್ವೇದ ಕಾಲೇಜು, ಹಾಸನದ ಪ್ರಾಂಶುಪಾಲೆ ಡಾ.ಶೈಲಜಾ, ಎಸ್‌ಡಿಎಂ ಆಯುರ್ವೇದ ಕಾಲೇಜು, ಬೆಂಗಳೂರಿನ ಪ್ರಾಂಶುಪಾಲ ಡಾ.ಜಗದೀಶ್ ಕೆ., ಎಸ್‌ಡಿಎಂಸಿ ಎಎಚ್‌ಆರ್‌ಸಿ, ಉಡುಪಿಯ ಉಪಪ್ರಾಂಶುಪಾಲ ಡಾ.ನಿರಂಜನ್ ರಾವ್ ಹಾಗೂ ಡಾ.ನಾಗರಾಜ್ ಎಸ್. ಮೊದಲಾದವರು ಉಪಸ್ಥಿತರಿದ್ದರು.






