ಕಬ್ಬದುಳುಮೆ ಕಾವ್ಯಲೋಕದ ಓದಿನ ಹೊಸಪರಿಯ ಪ್ರಯತ್ನ: ವೆಂಕಟರಮಣ ಐತಾಳ್

ಉಡುಪಿ, ಸೆ.30: ಹಳಗನ್ನಡ ಪಠ್ಯಗಳ ಸಂಧಿಬಂಧಗಳನ್ನು ಒಡೆದು ಒಳಗಿನ ತಿಳಿವನ್ನು ಅರಗಿಸಿಕೊಳ್ಳುವ ನಿರಂತರ ಬೇಸಾಯವಾದ ಕಬ್ಬದುಳುಮೆ ಕನ್ನಡ ಕಾವ್ಯಲೋಕದ ಓದಿನ ಹೊಸಪರಿಯ ಪ್ರಾಯೋಗಿಕತೆಯನ್ನು ಪರಿಚಯಿಸುವ ಅನನ್ಯ ಪ್ರಯತ್ನವಾಗಿದೆ ಎಂದು ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್ ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ವತಿಯಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಉಡುಪಿ ಸಹಯೋಗದೊಂದಿಗೆ ಕಾಲೇಜಿನಲ್ಲಿ ಪ್ರಾಚೀನ ಕನ್ನಡ ಕಾವ್ಯದೋದು ನಿರಂತರ ಕಮ್ಮಟ ‘ಕಬ್ಬದುಳುಮೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಹಳಗನ್ನಡ ಕಾವ್ಯಗಳ ಮೇಲಿರಿಸಿದ ಉಳುಮೆಯ ಸಾಧನವಾದ ನೇಗಿಲಿಗೆ ಮಾವು-ಹಲಸುಗಳ ಗೊಂಚಲನ್ನು ಕಟ್ಟಿ ಚಾಲನೆ ನೀಡಿ ಉಳುಮೆಗೆ ಶುಭ ಹಾರೈಸಿದರು.
ಕೋಟ ಪಡುಕೆರೆ ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಮೇಶ್ ಆಚಾರ್ಯ ಮಾತನಾಡಿ, ಕಾವ್ಯಗಳ ಓದು ವರ್ಣನಾ ಜಗತ್ತಿಗಷ್ಟೇ ಸೀಮಿತವಾಗದೆ ವಾಸ್ತವಿಕ ಬದುಕಿನ ನಿತ್ಯ-ಸತ್ಯಗಳನ್ನು ಹುಡುಕುವ ದಾರಿಯಾಗ ಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮತ್ತು ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಮಾತನಾಡಿ, ಹಳಗನ್ನಡ ಪಠ್ಯಗಳ ಓದೆಂದರೆ ಕೇವಲ ಸದ್ದು ಮಾಡುವುದಲ್ಲ, ಬದಲಾಗಿ ಸೈದ್ದಾಂತಿಕ ಹಾಗೂ ತಾತ್ವಿಕ ನೆಲೆಗಟ್ಟಿನಲ್ಲಿ ಪಠ್ಯದ ಒಳಗಿರುವ ರಾಜಕೀಯ ನಡೆಯನ್ನು ಗ್ರಹಿಸುವ ಮೂಲಕ ನಮ್ಮ ಕಾಲವನ್ನು ನಾವು ಸರಿಯಾಗಿ ಓದಿಕೊಳ್ಳುವ ಬಗೆಯಾಗಿದೆ ಎಂದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸೌಮ್ಯಲತಾ ಪಿ. ಪ್ರಾಸ್ತಾವಿಕ ವಾಗಿ ಮಾತನಾಡಿ, ಕಬ್ಬದುಳುಮೆ ಪರಿಕಲ್ಪನೆ ರೂಪಿತವಾದ ಹಿನ್ನೆಲೆ ಮತ್ತು ಅದರ ಪ್ರಯೋಗದ ವಿಸ್ತರಣೆಯನ್ನು ಪರಿಚಯಿಸಿದರು.
ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ. ಹಾಗೂ ಉಡುಪಿ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಶಾಲಿನಿ ಯು.ಬಿ. ಉಪಸ್ಥಿತರಿದ್ದರು. ಭೀಮಾಂಭಿಕ ಸ್ವಾಗತಿಸಿ ಅನುಶ್ರೀ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.






