ವಿದ್ಯಾರ್ಥಿ ವೇತನ ವಿತರಣೆ-ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮ

ಉಡುಪಿ, ಸೆ.30: ಜಮಿಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ತಾಲೂಕು ಘಟಕದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಾಗೂ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮ ವನ್ನು ಇತ್ತೀಚೆಗೆ ಉಡುಪಿ ಜಾಮೀಯ ಮಸೀದಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಮಾದಕ ವ್ಯಸನದ ಅಪಾಯದ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಶ್ಪಾಕ್ ಅಹ್ಮದ್ ಕಾರ್ಕಳ, ಉಡುಪಿ ಜಾಮೀಯ ಮಸೀದಿಯ ಅಧ್ಯಕ್ಷ ರಿಯಾಝ್ ಅಹ್ಮದ್ ಮಾತನಾಡಿದರು.
ಈ ಸಂದರ್ಭದಲ್ಲಿ ಸುಮಾರು 50 ಮಕ್ಕಳಿಗೆ ಝಕಾತ್ ಹಣದಿಂದ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಅಧ್ಯಕ್ಷತೆಯನ್ನು ಜಮೀಯ್ಯತುಲ್ ಫಲಾಹ್ ಉಡುಪಿ ತಾಲೂಕು ಅಧ್ಯಕ್ಷ ವಿ.ಎಸ್.ಉಮರ್ ವಹಿಸಿದ್ದರು. ಮಸೀದಿಯ ಮೌಲಾನ ರಶೀದ್ ಉಮ್ರಿ ಕುರಾನ್ ಪಠಿಸಿದರು.
ಉಡುಪಿ ತಾಲೂಕು ಕಾರ್ಯದರ್ಶಿ ಸಮೀರ್ ಎಂ. ಕಾರ್ಯಕ್ರಮ ಸಂಘಟಿಸಿದರು. ಕೋಶಾಧಿಕಾರಿ ನಝೀರ್ ನೇಜಾರ್ ವಂದಿಸಿದರು. ಸದಸ್ಯ ಫಝೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.




