ಉಡುಪಿ ಜಿಲ್ಲಾಸ್ಪತ್ರೆಯ ಕಾರ್ಯಾರಂಭಕ್ಕೆ ಒತ್ತಾಯಿಸಿ ಕರವೇ ಧರಣಿ ಪ್ರಾರಂಭ
ಜಾಗಟೆ, ಗಂಟೆ ಬಾರಿಸಿ ಅಹೋರಾತ್ರಿ ಧರಣಿಗೆ ಚಾಲನೆ

ಉಡುಪಿ, ಅ.1: ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ, ಅಜ್ಜರಕಾಡಿನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಉಡುಪಿ ಜಿಲ್ಲಾಸ್ಪತ್ರೆ ಇನ್ನೂ ಕಾರ್ಯಾರಂಭ ಮಾಡದಿರುವುದನ್ನು ಪ್ರತಿಭಟಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಇಲ್ಲಾ ಸಮಿತಿ ನೇತೃತ್ವದಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ಪ್ರಾರಂಭ ಗೊಂಡ ಏಳು ದಿನಗಳ ಅಹೋರಾತ್ರಿ ಧರಣಿಗೆ ರಾಜ್ಯ ಸಂಚಾಲಕ ಪ್ರಸನ್ನಕುಮಾರ್ ಶೆಟ್ಟಿ ಗಂಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರವೇ ಸಾರ್ವಜನಿಕರ ಸೇವೆಗೆ ಸಮರ್ಪಿ ಸುವಂತೆ ಆಗ್ರಹಿಸಿ ಕರವೇ ಉಡುಪಿ ಜಿಲ್ಲಾ ಸಮಿತಿ ಹೋರಾಟಕ್ಕಿಳಿದಿದೆ. ನೂತನ ಜಿಲ್ಲಾಸ್ಪತ್ರೆ ನಿರ್ಮಾಣಗೊಂಡು ವರ್ಷ ಕಳೆದರೂ ಇನ್ನೂ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಆಸ್ಪತ್ರೆಯಲ್ಲಿ ಅಗತ್ಯ ಯಂತ್ರೋಪಕರಣ, ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿ ಯನ್ನು ತಕ್ಷಣ ನಿಯೋಜಿಸಿ ಸೇವೆ ಆರಂಭಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಈ ವೇಳೆ ಜಾಗಟೆ ಹಾಗೂ ಗಂಟೆ ಬಾರಿಸುವ ಮೂಲಕ ಸರಕಾರ ಹಾಗೂ ಜಿಲ್ಲಾಡಳಿತವನ್ನು ಎಚ್ಚರಿಸಲಾಯಿತು. ಕರವೇ ಗೌರವಾಧ್ಯಕ್ಷ ಅನ್ಸರ್ ಅಹಮದ್ ಮಾತನಾಡಿ, ಜಾಗಟೆ ಹಾಗೂ ಗಂಟೆ ಬಾರಿಸುವ ಮೂಲಕ ನಿದ್ದೆಯಲ್ಲಿ ರುವ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯ ಮಾಡುತ್ತಿದ್ದೇವೆ. ಮೊದಲ ಮೂರು ದಿನಗಳ ಧರಣಿ ಸಾಂಕೇತಿಕವಾ ಗಿದ್ದು, ಬಳಿಕ ಸಂಘಟನೆಯ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲಿದ್ದಾರೆ ಎಂದರು.
ಏಳು ದಿನಗಳೊಳಗೆ ಜಿಲ್ಲಾಡಳಿತ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅನ್ಸರ್ ಅಹಮದ್ ಎಚ್ಚರಿಸಿದರು.
ಕರವೇ ರಾಜ್ಯ ಸಂಚಾಲಕ ಪ್ರಸನ್ನ ಶೆಟ್ಟಿ ಮಾತನಾಡಿ, ಯಾವುದೇ ಖಾಸಗಿ ಲಾಬಿಗೆ ಮಣಿಯದೆ ರಾಜ್ಯ ಸರ್ಕಾರ ಕೂಡಲೇ ನೂತನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಆರಂಭಿಸಬೇಕು. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯ ದೊರೆಯಲಿದೆ. ಏಳು ದಿನಗಳೊಳಗೆ ಸೇವೆ ಆರಂಭಿಸದಿದ್ದರೆ ಮುಂದಿನ ಹಂತದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಧರಣಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.






