ಉಡುಪಿ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಉತ್ತಮ ಮಳೆ

ಉಡುಪಿ, ಅ.5: ಸೋಮವಾರ ಮುಂಜಾನೆಯಿಂದ ಉಡುಪಿ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಕಳೆದ ರಾತ್ರಿಯಿಂದಲೇ ಉತ್ತಮ ಮಳೆ ಸುರಿಯುತ್ತಿದೆ. ಆದರೆ ಅಪರಾಹ್ನದ ಬಳಿಕ ಬಿಸಿಲು ಮೂಡಿದ್ದು, ಮಳೆಯ ಪ್ರಮಾಣ ತಗ್ಗಿದೆ.
ಉಡುಪಿ, ಮಣಿಪಾಲ, ಬ್ರಹ್ಮಾವರ ಆಸುಪಾಸಿನ ಊರುಗಳಲ್ಲಿ ಇಂದು ಮುಂಜಾನೆಯಿಂದ ಭಾರೀ ಗುಡುಗು-ಸಿಡಿಲು ಸಹಿತ ಮಳೆ ಸುರಿಯಿತು. ಇದರಿಂದ ಕಳೆದ ಮೂರ್ನಾಲ್ಕು ದಿನಗಳಿಂದ ವಿಪರೀತ ಬಿಸಿಲು ಹಾಗೂ ಸೆಕೆಯಿಂದ ಕಂಗೆಟ್ಟ ಜನತೆಗೆ ತಂಪಿನ ಸಿಂಚನವಾದಂತಾಗಿದೆ. ಸತತ ಮಳೆಯಿಂದ ನಗರದ ರಸ್ತೆಗಳಲ್ಲೇ ನೀರು ಹರಿದು ಅಲ್ಲಲ್ಲಿ ಸಂಚಾರಕ್ಕೆ ಸಮಸ್ಯೆಯೂ ಉಂಟಾಗಿದೆ. ಹೆಚ್ಚಿನ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಮತ್ತೆ ಕೆರೆಯ ದರ್ಶನವಾಯಿತು.
ಮದ್ಯೆ ಮದ್ಯೆ ವಿರಾಮ ಪಡೆದು ಆಗಾಗ ಸುರಿದ ಮಳೆ ಅಪರಾಹ್ನದ ಬಳಿಕ ನಿಂತಿದ್ದು, ಆಕಾಶದಲ್ಲಿ ಸೂರ್ಯನ ದರ್ಶನವಾಗಿತ್ತು. ಸಂಜೆ ಬಳಿಕ ಅಲ್ಲಲ್ಲಿ ಮತ್ತೆ ಮಳೆ ಸುರಿಯುತ್ತಿದೆ. ಮಳೆಯಿಂದ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಬಾಬು ಎಂಬವರ ಮನೆಗೆ ಭಾಗಶ: ಹಾನಿಯಾಗಿದ್ದು 25,000 ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಮಾಹಿತಿ ಬಂದಿದೆ.
ಇಂದು ಬೆಳಗ್ಗೆ 8:30ರವರೆಗಿನ ಮಾಹಿತಿಯಂತೆ ಜಿಲ್ಲೆಯಲ್ಲಿ ಹಿಂದಿನ 24 ಗಂಟೆಗಳಲ್ಲಿ ಸರಾಸರಿ 18.6ಮಿ.ಮೀ. ಮಳೆ ಸುರಿದಿತ್ತು. ಕಾರ್ಕಳದಲ್ಲಿ ಅತ್ಯಧಿಕ 33.2ಮಿ.ಮೀ. ಮಳೆಯಾದರೆ ಹೆಬ್ರಿಯಲ್ಲಿ 31.2ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಬ್ರಹ್ಮಾವರದಲ್ಲಿ 16.1, ಕುಂದಾಪುರದಲ್ಲಿ 14.1, ಕಾಪುವಿನಲ್ಲಿ 10.9, ಬೈಂದೂರಿನಲ್ಲಿ 9.7 ಹಾಗೂ ಉಡುಪಿಯಲ್ಲಿ 4.5ಮಿ.ಮೀ. ಮಳೆಯಾದ ವರದಿ ಬಂದಿದೆ.
ಮೀನುಗಾರರಿಗೆ ಎಚ್ಚರಿಕೆ: ಮುಂದಿನ 24 ಗಂಟೆಗಳಲ್ಲಿ ಗುಡುಗು- ಸಿಡಿಲು ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಗಂಟೆಗೆ 35ರಿಂದ 45 ಕಿ.ಮೀ. ವೇಗದ ಗಾಳಿಯೂ ಬೀಸುವ ಸಾಧ್ಯತೆ ಇದೆ. ಈ ವೇಳೆ ಅರಬಿಸಮುದ್ರ ಪ್ರಕ್ಷುಬ್ಧವಾಗಿ ರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಕರಾವಳಿಯ ಮೂರು ಜಿಲ್ಲೆಗಳ ಅಲ್ಲಲ್ಲಿ ನಾಳೆ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಆದ್ದರಿಂದ ಜನತೆ ಎಚ್ಚರದಿಂದಿರುವಂತೆ ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.






