ಸಹಕಾರ ಸಂಸ್ಥೆಗಳ ಯಶಸ್ಸಿನಲ್ಲಿ ವೃತ್ತಿಪರತೆ ಪಾತ್ರ ನಿರ್ಣಯಕ : ಜಿಲ್ಲಾ ಮಟ್ಟದ ಸಹಕಾರ ತರಬೇತಿ ಕಾರ್ಯಕ್ರಮದಲ್ಲಿ ಜಯಕರ ಶೆಟ್ಟಿ

ಉಡುಪಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಸಹಕಾರ ತರಬೇತಿ ಕಾರ್ಯಕ್ರಮವು ಶುಕ್ರವಾರ ಉಡುಪಿಯ ಹೋಟೆಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸಹಕಾರ ಸಂಸ್ಥೆಗಳ ಯಶಸ್ಸಿನಲ್ಲಿ ವೃತ್ತಿಪರತೆ, ಪಾರದರ್ಶಕ ಆಡಳಿತ, ಆಧುನಿಕ ನಿರ್ವಹಣಾ ಕೌಶಲ್ಯ ಹಾಗೂ ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಸಹಕಾರ ಸಂಸ್ಥೆಗಳು ತಂತ್ರಜ್ಞಾನ ಮತ್ತು ಜ್ಞಾನಾಧಾರಿತ ಕಾರ್ಯವೈಖರಿಯನ್ನು ಅಳವಡಿಸಿ ಕೊಂಡು ಸದಸ್ಯ ಕೇಂದ್ರಿತ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಒದಗಿಸಬೇಕೆಂದು ಅವರು ಹೇಳಿದರು.
ತರಬೇತುದಾರರಾಗಿ ಭಾಗವಹಿಸಿದ್ದ ಶಿವಮೊಗ್ಗದ ಸನ್ನದು ಲೆಕ್ಕ ಪರಿಶೋಧಕ ವರುಣ್ ಭಟ್, ಸಹಕಾರಿಗಳಲ್ಲಿ ವೃತ್ತಿಪರತೆ ಮತ್ತು ವ್ಯವಹಾರಗಳ ಅಭಿವೃದ್ಧಿಗಾಗಿ ಅದರ ಬಳಕೆ ಹಾಗೂ ಮಾನವ ಸಂಪನ್ಮೂಲಗಳು, ಅವುಗಳ ಬಳಕೆ ಹಾಗೂ ಅಭಿವೃದ್ಧಿ ಎಂಬ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಗಾಂಧಿ ಜಯಂತಿಯ ಅಂಗವಾಗಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಲೆಕ್ಕಿಗರಾದ ಅಶ್ವಿನಿ ಕುಮಾರ್ ಎಂ., ಆಡಳಿತ ಮಂಡಳಿಯ ನಿರ್ದೇಶಕರಾದ ಸಾಧು ಸಾಲ್ಯಾನ್, ಎಲ್.ಉಮಾನಾಥ್, ಜಯಾ ಶೆಟ್ಟಿ ಹಾಗೂ ಸದಾಶಿವ ನಾಯ್ಕ್ ಉಪಸ್ಥಿತರಿದ್ದರು.
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಲ್ಪೆ ಶಾಖೆಯ ವ್ಯವಸ್ಥಾಪಕ ನವೀನ್ ಕೆ. ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ವಂದಿಸಿದರು.






