ಉಡುಪಿ ಜಿಲ್ಲೆಯ ಎಲ್ಲಾ ಜನನ- ಮರಣಗಳನ್ನು ನಿಖರ ಮಾಹಿತಿ ಸಹಿತ ದಾಖಲಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ಅ.6: ಜಿಲ್ಲೆಯಲ್ಲಿ ಪ್ರತಿದಿನ ಸಂಭವಿಸುವ ಪ್ರತಿಯೊಂದು ಜನನ ಮತ್ತು ಮರಣದ ವಿವರಗಳನ್ನು ಯಾವುದೇ ತಪ್ಪುಗಳಿಗೆ ಆಸ್ಪದ ನೀಡದಂತೆ ನಿಖರವಾಗಿ ಮಾಹಿತಿಗಳೊಂದಿಗೆ ದಾಖಲು ಮಾಡುವಂತೆ ನೋಂದಣಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದ್ದಾರೆ.
ಮಂಗಳವಾರ ಮಣಿಪಾಲ ರಜತಾದ್ರಿಯಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲಾ ಮಟ್ಟದ ಜನನ ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜನನ ಮತ್ತು ಮರಣ ನೋಂದಣಿ ಭವಿಷ್ಯದಲ್ಲಿ ಅಗತ್ಯವಿದ್ದು, ಇವುಗಳ ಪ್ರಮಾಣಪತ್ರ ಪ್ರತಿಯೊಂದು ದಾಖಲೆಗೂ ಅವಶ್ಯಕವಿರುತ್ತದೆ. ಇದನ್ನು ಮನಗಂಡು ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ಜನನ ಮತ್ತು ಮರಣದ ವಿವರಗಳನ್ನು ದಾಖಲು ಮಾಡುವಾಗ ನೋಂದಣಾಧಿಕಾರಿಗಳು ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ಯಾವುದೇ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ನೋಂದಣಿ ಸಮಯದಲ್ಲಿ ತಂದೆ-ತಾಯಿಯರ ಹೆಸರು, ಲಿಂಗ, ತಪ್ಪು ನಮೂದು, ಬದಲು, ಸ್ಥಳ ಮಹಜರು ಮಾಡದೇ ಮರಣ ಪ್ರಮಾಣಪತ್ರ ಸೃಜನೆ, ನೋಂದಣಿ ಘಟಕದ ವ್ಯಾಪ್ತಿ ಮೀರಿ ನೋಂದಣಿ, ಮೂಲ ದಾಖಲೆಗಳನ್ನು ಪರಿಶೀಲಿಸದೇ ಘಟನೆಗಳ ಹೆಸರು, ದಿನಾಂಕ ಮತ್ತು ವಿಳಾಸ ವನ್ನು ತಪ್ಪಾಗಿ ನಮೂದಿಸುವುದು ಸೇರಿದಂತೆ ಸಾಮಾನ್ಯ ತಪ್ಪುಗಳು ನೋಂದಣಿ ಸಮಯದಲ್ಲಿ ಆಗುತ್ತಿರುವುದು ಕಂಡುಬಂದಿದೆ ಎಂದರು.
ಮಗುವಿನ ಹೆಸರು ಮತ್ತು ಜೈವಿಕ ತಂದೆ-ತಾಯಿಯ ಹೆಸರನ್ನು ಸೇರ್ಪಡೆ ಹಾಗೂ ತಿದ್ದುಪಡಿ ಮಾಡುವ ಸಂದರ್ಭ ದಲ್ಲಿ ಜೈವಿಕ ತಂದೆ / ತಾಯಿಯ ಜಂಟಿ ಸಹಿ ಮತ್ತು ಅಗತ್ಯ ದಾಖಲೆಗಳನ್ನು ಖಾತರಿಪಡಿಸಿಕೊಂಡು ನಿಯಮಾನು ಸಾರ ಮಾಹಿತಿಯನ್ನು ದಾಖಲಿಸಬೇಕು. ಜನನ- ಮರಣ ನೋಂದಣಿ ಸಮಯದಲ್ಲಿ ಸಾಧ್ಯವಾದಲ್ಲಿ ಕರಡು ಪ್ರತಿಯನ್ನು ಸಂಬಂಧ ಪಟ್ಟವರಿಗೆ ತೋರಿಸಿ, ಅನುಮೋದನೆ ಪಡೆಯುವುದು ಸೂಕ್ತ ಎಂದರು.
ಜನನದ ಸಮಯದಲ್ಲಿ ಮಗು ಮರಣ ಹೊಂದಿದ ಸಂದರ್ಭದಲ್ಲಿ ನೋಂದಣಿ ಮಾಡುವಾಗ ಮರಣದ ಕಾರಣ ಕುರಿತು ನಮೂದಿಸಲು ಪೋರ್ಟಲ್‌ನಲ್ಲಿ ಯಾವುದೇ ಆಯ್ಕೆಗೆ ನಮೂದು ಇಲ್ಲದೇ ಇರುವುದು ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪೋರ್ಟಲ್‌ನಲ್ಲಿ ಸೃಜಿಸಲು ಸರ್ಕಾರದ ಗಮನಕ್ಕೆ ತರಲು ಪತ್ರ ಬರೆಯುವಂತೆ ಸ್ವರೂಪ ಟಿ.ಕೆ. ಸೂಚಿಸಿದರು.
ಜನನ ಮರಣ ಘಟನೆಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸುವ ಬಗ್ಗೆ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ನಂತರ ಅಂತಹ ಘಟನೆಗಳಿಗೆ ಮಾತ್ರ ಅಲಭ್ಯ ಪ್ರಮಾಣ ಪತ್ರ ನೀಡಬೇಕು. ಒಂದೊಮ್ಮೆ ಅರ್ಜಿದಾರರು ನೀಡಿರುವ ದಾಖಲೆಗಳು ನಕಲಿ ಎಂದು ಕಂಡುಬಂದಲ್ಲಿ ಸ್ಥಳೀಯ ಪೊಲೀಸರ ಪರಿಶೀಲನೆಯ ನಂತರವಷ್ಟೇ ಅಲಭ್ಯ ಪ್ರಮಾಣ ಪತ್ರ ನೀಡಬೇಕು ಎಂದರು.
ನ್ಯಾಯಾಲಯದ ಜನನ- ಮರಣ ತಿದ್ದುಪಡಿ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಸಮನ್ಸ್ ಜಾರಿಯಾದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯವಿರುವ ದಾಖಲೆಗಳೊಂದಿಗೆ ಹಾಜರಾಗಿ ನಿಲುವನ್ನು ಸಲ್ಲಿಸಬೇಕು. ಅಧಿಕಾರಿಗಳು ಹಾಜರಾಗಲು ಸಾಧ್ಯವಿಲ್ಲದಿದ್ದಲ್ಲಿ ಅವರುಗಳ ಪರವಾಗಿ ಪ್ರತಿನಿಧಿಯನ್ನು ನಿಯೋಜಿಸುವುದರೊಂದಿಗೆ ಗೈರು ಹಾಜರಾತಿಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ಡಿಸಿ ತಿಳಿಸಿದರು.
ಜನನ ಮತ್ತು ಮರಣದ ನೋಂದಣಿ ಕಾರ್ಯಗಳು ಸುವ್ಯವಸ್ಥಿತವಾಗಿ ನಡೆಯುವ ಕುರಿತು ಸಂಬಂಧಪಟ್ಟ ಅಧಿಕಾರಿ ಗಳು ಆಗಿಂದಾಗ್ಗೆ ಜನನ- ಮರಣ ನೋಂದಣಿ ಘಟಕಗಳ ತಪಾಸಣೆಯನ್ನು ಕೈಗೊಳ್ಳಬೇಕು ಎಂದು ಹೇಳಿದ ಜಿಲ್ಲಾಧಿಕಾರಿ, ಎಲ್ಲಾ ಜನನ ಮರಣ ನೋಂದಣಾಧಿಕಾರಿಗಳು, ಉಪನೋಂದಣಾಧಿಕಾರಿಗಳು ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ನೋಂದಣಿ ಕಾರ್ಯದ ಕುರಿತು ಸಮರ್ಪಕ ತರಬೇತಿ ನೀಡಿ, ನಂತರ ನೋಂದಣಿ ಕಾರ್ಯಕ್ಕೆ ನಿಯೋಜಿಸಬೇಕು ಎಂದರು.
ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಋತುವಿನ ಬೆಳೆ ಸಮೀಕ್ಷೆ ಕ್ಷೇತ್ರ ಮರು ಹೊಂದಾಣಿಕೆ ವರದಿಯನ್ನು ನಿಗದಿತ ಕಾಲದ ಒಳಗೆ ಪೂರ್ಣಗೊಳಿಸಿ, ತಾಲೂಕುವಾರು ವರದಿಯನ್ನು ಕೂಢೀಕರಿಸಿ, ಅಂಕಿ- ಅಂಶಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಡಿಹೆಚ್‌ಓ ಡಾ.ಬಸವರಾಜ್ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
‘ಜಿಲ್ಲೆಯಲ್ಲಿ ಒಟ್ಟು 574 ಜನನ-ಮರಣ ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 2026ರ ಜನವರಿಯಿಂದ ಈವರೆಗೆ ಗ್ರಾಮಾಂತರ ಪ್ರದೇಶದಲ್ಲಿ 1256, ನಗರ ವ್ಯಾಪ್ತಿಯಲ್ಲಿ 7095 ಸೇರಿದಂತೆ ಒಟ್ಟು 8351 ಜನನ ಘಟನೆಗಳು ನೋಂದಾವಣೆಯಾಗಿವೆ. ಗ್ರಾಮೀಣ ಪ್ರದೇಶದಲ್ಲಿ 5399, ನಗರ ಪ್ರದೇಶದಲ್ಲಿ 3583 ಸೇರಿದಂತೆ ಒಟ್ಟು 8982 ಮರಣ ಘಟನೆಗಳು ನೋಂದಾವಣೆಯಾಗಿವೆ. 39 ನಿರ್ಜೀವ ಜನನಗಳು ಸಹ ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವು 912 ರಷ್ಟಿದೆ.
-ಎಂ.ವಿ.ದೊಡ್ಡಮನಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಉಡುಪಿ.






