ಉಳ್ತೂರು: ಎಫ್‌ಎಸ್‌ಟಿಪಿ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ

ಕುಂದಾಪುರ, ಅ.6: ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರು ಗ್ರಾಮದ ಸರ್ವೇ ನಂ 219/2ರಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಮಲತ್ಯಾಜ್ಯ ಸಂಸ್ಕರಣಾ ಘಟಕ(ಎಫ್.ಎಸ್.ಟಿ.ಪಿ) ಯೋಜನೆಯ ವಿರುದ್ಧ ಉಳ್ತೂರು ಕೆದೂರು ಬೇಳೂರು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಉಳ್ತೂರು, ಕೆದೂರು, ಬೇಳೂರು, ಮಲ್ಯಾಡಿ, ಶಾನಾಡಿ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಉಳ್ತೂರು ಮಹಾ ಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಹಿರಿಯರು, ಜನಪ್ರತಿನಿಧಿಗಳು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳೊಂದಿಗೆ ದೇವಸ್ಥಾನದಿಂದ ಯೋಜನಾ ಪ್ರದೇಶದ ವರೆಗೆ ಪಾದಯಾತ್ರೆ ನಡೆಸಿ, ಜಿಲ್ಲಾಡಳಿತ ಮತ್ತು ಗುತ್ತಿಗೆದಾರರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಉಳ್ತೂರು ಪೇಟೆ ಬಂದ್ ಮಾಡಿ ಪ್ರತಿಭಟನೆಗೆ ವರ್ತಕರು ಬೆಂಬಲ ಸೂಚಿಸಿದರು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಲತ್ಯಾಜ್ಯ ಸಂಸ್ಕರಣಾ ಘಟಕ ದಿಂದ ಜನರಿಗಾಗುವ ತೊಂದರೆಯನ್ನು ಕೂಡ ನಾವುಗಳು ಪಕ್ಷಭೇದ ಮರೆತು ಪ್ರಬಲವಾಗಿ ವಿರೋಧ ವ್ಯಕ್ತಪಡಿಸು ತ್ತೇವೆ. ಈ ಕುರಿತು ಶಾಸಕರು ಸೇರಿದಂತೆ ನಾವು ಕೂಡ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿ ಈ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸುತ್ತೇವೆ ಎಂದರು.
ಕುಂದಾಪುದ ತಾಪಂ ಮಾಜಿ ಸದಸ್ಯ ಸದಾನಂದ ಶೆಟ್ಟಿ ಕೆದೂರು ಮಾತನಾಡಿ, ಉಳ್ತೂರು ಜನವಸತಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿ ಪ್ರಾರಂಭಿಕ ಹಂತದಲ್ಲಿರುವ ಎಫ್.ಎಸ್.ಟಿ.ಪಿ ಘಟಕವನ್ನು ಜಿಲ್ಲಾಡಳಿತವು ಯಾವುದೇ ಸ್ಥಳೀಯಾಡಳಿತದ ಪೂರ್ವನುಮತಿ ಪಡೆಯದೇ ಸ್ಥಳೀಯರಿಗೂ ಕೂಡ ಯಾವುದೇ ಸಮಪರ್ಕ ಮಾಹಿತಿ ನೀಡದೆ ಏಕಾಏಕಿ ಸ್ಥಳೀಯರ ಮೇಲೆ ದಬ್ಬಳಿಕೆ ಮಾಡಿ ರಾತ್ರೋ ರಾತ್ರಿ ಘಟಕವನ್ನು ನಿರ್ಮಿಸಲು ಹೊರಟಿದೆ ಎಂದು ದೂರಿದರು.
ಸಮಾಜ ಸೇವಕ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೆದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಪತ್ ಕುರ್ಮಾ ಶೆಟ್ಟಿ ಶಾನಾಡಿ, ವಕೀಲರಾದ ವಸಂತ ಶೆಟ್ಟಿ, ಅವಿನಾಶ್ ಶೆಟ್ಟಿ ಬೇಳೂರು, ಪ್ರಮುಖ ಹೋರಾಟಗಾರರಾದ ಕೆದೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಶಾನಾಡಿ ಶರತ್ ಕುರ್ಮಾ ಹೆಗ್ಡೆ, ಸುಧೀರ್ ಮಲ್ಯಾಡಿ, ಅವಿನಾಶ್ ಉಳ್ತೂರು, ಪ್ರತಾಪ್ ಶೆಟ್ಟಿ ಉಳ್ತೂರು ಮೊದಲಾದವರು ಹಾಜರಿದ್ದರು.






