ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತೀ ಅಗತ್ಯ: ಐವನ್ ಡಿಸೋಜ

ಉಡುಪಿ : ಕಾನೂನು ದುಬಾರಿ ಎಂಬ ಕಾರಣದಿಂದ ಯಾರು ಕೂಡ ನ್ಯಾಯದಾನದಿಂದ ವಂಚಿತರಾಗಬಾರದು. ಕಾನೂನಿನ ಮೂಲಕ ನ್ಯಾಯ ಪಡೆಯಲು ಸಮೀಪದಲ್ಲಿಯೇ ಸೌಲಭ್ಯಗಳು ಇರಬೇಕು. ಆ ನಿಟ್ಟಿನಲ್ಲಿ ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತೀ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಐವನ್ ಡಿಸೋಜ ಹೇಳಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಮಂಗಳವಾರ ನಡೆದ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತು ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬುದು ಸುಮಾರು 18ವರ್ಷಗಳ ಹಿಂದಿನ ಬೇಡಿಕೆ ಯಾಗಿದೆ. ಉಡುಪಿ, ದ.ಕ., ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯವರ ಬೇಡಿಕೆ ಕೂಡ ಇದೇ ಆಗಿದೆ. ಇಲ್ಲಿನ ಶೇ.40ರಷ್ಟು ಪ್ರಕರಣಗಳು ಹೈಕೋರ್ಟ್‌ಗಳಲ್ಲಿ ಇತ್ಯರ್ಥ ಆಗದೆ ಬಾಕಿ ಇದೆ. ಕರಾವಳಿಯ ಕಕ್ಷಿದಾರರು ತಮ್ಮ ನ್ಯಾಯಕ್ಕಾಗಿ ದೂರದ ಬೆಂಗಳೂರು ಹೋಗುವ ಸ್ಥಿತಿ ಇದೆ. ಒಂದೆಡೆ ಹಣ ಖರ್ಚು ಮತ್ತೊಂದೆಡೆ ಸಮಯ ಕೂಡ ವ್ಯರ್ಥವಾಗುತ್ತದೆ ಎಂದರು.
ಈ ಹೋರಾಟದಲ್ಲಿ ಯಾವುದೇ ರಾಜಕೀಯ ಇಲ್ಲ. ಪಕ್ಷಾತೀತವಾದ ಹೋರಾಟ ಇದಾಗಿದೆ. ಮಂಗಳೂರಿನಲ್ಲಿ ಪೀಠ ಸ್ಥಾಪಿಸಲು ಬೇಕಾದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳಿವೆ. ಸಾಕಷ್ಟು ಕಾನೂನು ವಿದ್ಯಾಲಯಗಳು ಕೂಡ ಇಲ್ಲಿವೆ. ಕಾನೂನು ಪದವೀಧರರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಪೀಠಕ್ಕೆ ಬೇಕಾದ ಕೌಶಲ್ಯಯುತ ಮಾನವ ಸಂಪನ್ಮೂಲ ಕೂಡ ನಮ್ಮಲ್ಲಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಈ ಸಂಬಂಧ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದೆ. ಮುಂದಿನ ತಿಂಗಳು ಈ ಸಮಿತಿ ಪರೀಶೀಲನೆ ನಡೆಸಲು ಆರು ಜಿಲ್ಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಆಗ ಇಲ್ಲಿನ ಪ್ರಮುಖರು ಪೀಠ ಸ್ಥಾಪನೆ ಅಗತ್ಯಯನ್ನು ಸಮಿತಿಗೆ ಅರಿವು ಮಾಡಿಕೊಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಕೀಲ ಮೆಲ್ವಿನ್ ನರೋನ್ಹಾ, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕಾರ್ಕಳ ವಕೀಲರ ಸಂಘದ ಕಾರ್ಯದರ್ಶಿ ಪದ್ಮಪ್ರಸಾದ್, ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಗೌತಮ್, ಉಪಾಧ್ಯಕ್ಷ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.






