ನೈಜ ಮತದಾರರ ಮತ ಕಳ್ಳತನಕ್ಕೆ ಬಿಜೆಪಿ ಕುತಂತ್ರ: ಐವನ್ ಡಿಸೋಜ

ಉಡುಪಿ, ಅ.6: ಚುನಾವಣಾ ಆಯೋಗ ಅರ್ಹ ಮತದಾರರನ್ನು ಹೊರಗಿಡುವ ಮೂಲಕ ಮತ ಕಳ್ಳತನ ಮಾಡು ತ್ತಿದೆ. ಯಾವುದೇ ಒತ್ತಡಕ್ಕೆ ಒಳಗಾದೆ ಕೆಲಸ ಮಾಡಬೇಕಾದ ಸಂವಿಧಾನಿಕ ಸಂಸ್ಥಾಗಿರುವ ಚುನಾವಣಾ ಆಯೋಗ ವನ್ನು ಇವತ್ತು ಖರೀದಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಚುನಾವಣೆ ಯಲ್ಲಿ ಗೆಲ್ಲುವ ಉದ್ದೇಶಕ್ಕಾಗಿ ಎಸ್‌ಐಆರ್ ಹೆಸರಿನಲ್ಲಿ ನೈಜ ಮತದಾರರ ಮತ ಕಳ್ಳತನ ಮಾಡುವ ಕುತಂತ್ರ ನಡೆಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.
ಬ್ರಹ್ಮಗಿರಿಯ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ಒತ್ತಡಕ್ಕೆ ಮಣಿದು ಬಿಎಲ್‌ಒಗಳ ಮೂಲಕ ನೈಜ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಯತ್ನ ನಡೆಯುತ್ತಿದೆ. ಅಲ್ಪಸಂಖ್ಯಾತರು, ದಲಿತರು ಹಾಗೂ ದುರ್ಬಲ ವರ್ಗದ ಮತ ಗಳನ್ನು ಕೈ ಬಿಡುವಂತೆ ಒತ್ತಡ ಹಾಕುತ್ತಿದೆ. ಫಾರಂ-7 ಮೂಲಕ ಅರ್ಹರನ್ನು ಅನರ್ಹರಾಗಿಸಲಾಗುತ್ತಿದೆ ಎಂದು ದೂರಿದರು.
ಬಿಜೆಪಿಗೆ ಬಾಂಗ್ಲಾದೇಶ, ಪಾಕಿಸ್ತಾನದ ಹೆಸರು ಹೇಳದೇ ಹೋದರೆ ನಿದ್ರೆ ಬರಲ್ಲ. ಅನರ್ಹ ಮತದಾರರು, ವಲಸಿಗರು ಎನ್ನುವ ಬಿಜೆಪಿಗೆ ಅಷ್ಟು ಧೈರ್ಯವಿದ್ದರೆ ಬಾಂಗ್ಲಾ/ಪಾಕಿಸ್ತಾನದ ಮತದಾರರ ಹೆಸರನ್ನು ತೋರಿಸಲಿ. ಚುನಾವಣೆ ಗೆಲ್ಲುವುದಕ್ಕಾಗಿಯೇ ಎಸ್‌ಐಆರ್ ಹೆಸರಿನಲ್ಲಿ ಈ ರೀತಿ ಮಾಡುವುದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸು ವುದು ಕಾಂಗ್ರೆಸ್ ಪಕ್ಷದ ಪ್ರಮುಖ ಆದ್ಯತೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಹಾಗೂ ಹೊಸ ನಾಯಕತ್ವವನ್ನು ಬೆಳೆಸುವುದ ಕ್ಕಾಗಿ ಎಐಸಿಸಿ ಸಂಘಟನಾ ಸೃಜನ್ ಅಭಿಯಾನ-2 ಯನ್ನು ಆರಂಭಿಸಿದೆ. ಈ ಬಗ್ಗೆ ಅ.30ರೊಳಗೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಹಾಗೂ 10 ಬ್ಲಾಕ್‌ಗಳಿಗೆ ತೆರಳಿ, ಕಾರ್ಯಕರ್ತರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಬ್ಲಾಕ್ ಹಾಗೂ ಗ್ರಾಮ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಕಳೆದ 5 ವರ್ಷಗಳಿಂದ ಹುದ್ದೆಯಲ್ಲಿ ಇರುವವರನ್ನು ಬದಲಾಯಿಸಿ ಹೊಸ ನಾಯಕತ್ವಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲರ ಅಭಿಪ್ರಾಯವೂ ಅಗತ್ಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಕಾರ್ಪೊರೇಟರ್ ಅಬ್ದುಲ್ ರವೂಫ್, ಶಾಲೇಟ್ ಪಿಂಟೋ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಷಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಾಜಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡ ರಾದ ಪ್ರಸಾದ್‌ರಾಜ್ ಕಾಂಚನ್, ರಾಜು ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಶಾಂತ್ ಜತ್ತನ್ನ, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.






