ಬ್ರಹ್ಮಾವರ: ಮರೆವಿನ ಕಾಯಿಲೆಗೆ (ಡಿಮೆನ್ಷಿಯಾ) ವೈದ್ಯಕೀಯ ಶಿಬಿರ

ಉಡುಪಿ, ಅ.8: ಮಧ್ಯವಯಸ್ಸಿನ ಬಳಿಕ ಈಗ ಬಹುಜನರಲ್ಲಿ ಸಾಮಾನ್ಯ ವಾಗಿ ಕಾಣಿಸಿಕೊಳ್ಳುವ ಮರೆವಿನ ಕಾಯಿಲೆ (ಡಿಮೆನ್ಷಿಯಾ) ಕುರಿತು ವೈದ್ಯಕೀಯ ಶಿಬಿರವೊಂದು ವಿವಿಧ ಇಲಾಖೆ ಹಾಗೂ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಬ್ರಹ್ಮಾವರದ ರೋಟರಿ ಸಮಾಜ ಮಂದಿರದಲ್ಲಿ ನಡೆಯಿತು. ಸುಮಾರು 200 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆ ಹಾಗೂ ಹಿರಿಯ ನಾಗರಿಕ ಕ್ರಿಯಾ ಯೋಜನೆಯ ಅಡಿಯಲ್ಲಿ ನಡೆದ ಈ ಒಂದು ದಿನದ ಶಿಬಿರ ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಕ್ಲಬ್ ಬ್ರಹ್ಮಾವರ, ಹಿರಿಯ ನಾಗರಿಕರ ವೇದಿಕೆ ಬ್ರಹ್ಮಾವರ ಮತ್ತು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಿತ್ತು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ ಅವರು ಶಿಬಿರವನ್ನು ಉದ್ಘಾಟಿಸಿ, ಕಳೆದ 25 ವರ್ಷಗಳಿಂದ ನಡೆದುಕೊಂಡುಬರುತ್ತಿರುವ ಇಂತಹ ಶಿಬಿರದ ಬಗ್ಗೆ ಸರಕಾರದ ಗಮನಕ್ಕೆ ತಂದು ಅನುದಾನ ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರಲ್ಲದೇ ಇದರಿಂದ ಇನ್ನಷ್ಟು ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂದರು.
ಉಡುಪಿ ಜಿಲ್ಲಾ ಕುಷ್ಟರೋಗ ನಿವಾರಣಾಧಿಕಾರಿ ಡಾ. ಲತಾ ನಾಯಕ್ ಮಾತನಾಡಿ, ಇಂತಹ ಅಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಆದಷ್ಟು ಮಾಹಿತಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಬ್ರಹ್ಮಾವರ ಇದರ ಅಧ್ಯಕ್ಷ ಎಚ್. ಪ್ರಮೋದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅರುಣ್‌ಕುಮಾರ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮೇಜರ್ ಬಾಲಕೃಷ್ಣ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ, ಬಾಳಿಗಾ ಆಸ್ಪತ್ರೆಯ ಡಾ.ಮಾನಸ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಖ್ಯಾತ ಮನೋರೋಗ ತಜ್ಞ ಹಾಗೂ ಉಡುಪಿ ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಮರೆವಿನ ಕಾಯಿಲೆ (ಡಿಮೆನ್ಶಿಯಾ)ಯ ಬಗ್ಗೆ ವಿವರಿಸಿ, ಅದನ್ನು ಗುರುತಿಸುವುದು ಹಾಗೂ ಕಾಯಿಲೆಯನ್ನು ತಡೆಗಟ್ಟುವಲ್ಲಿ ದೈನಂದಿನ ಜೀವನದಲ್ಲಿ ಅಡವಳಿಸಿಕೊಳ್ಳಬಹುದಾದ ಚಟುವಟಿಕೆಯ ಬಗ್ಗೆಯೂ ಮಾಹಿತಿ ನೀಡಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರತ್ನ ಸ್ವಾಗತಿಸಿ, ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯ ಯೋಜನಾ ಸಹಾಯಕ ಶಿವಾಜಿ ವಂದಿಸಿದರು.






