ತಪ್ಪು ಮಾಡಿಲ್ಲ; ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಎಎಸ್‌ಎನ್ ಹೆಬ್ಬಾರ್
ಅವಮಾನದ ವಿರುದ್ಧ ಅ.11ರಂದು ಸಾಲಿಗ್ರಾಮದಲ್ಲಿ ಪ್ರತಿಭಟನೆ

ಕುಂದಾಪುರ, ಅ.8: ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನನ್ನ ಭಾಷಣದಲ್ಲಿ ಹಳೆಯ ಹಾಸ್ಯದ ತುಣುಕೊಂದನ್ನು ಹೇಳಿದ್ದೆ. ಅದನ್ನು ತಪ್ಪಾಗಿ ಗ್ರಹಿಸಿಕೊಂಡು ವಿಶ್ವಕರ್ಮ ಸಮುದಾಯದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಯಾವುದೇ ತಪ್ಪು ಮಾಡಿಲ್ಲ. ಆದ್ದರಿಂದ, ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯ ದಲ್ಲಿರುವ ಕೇಸ್ ವಿಚಾರಕ್ಕೆ ಸಂಬಂಧಿ ಸಿದಂತೆ ಓರ್ವ ವ್ಯಕ್ತಿ ನನ್ನ ವಿರುದ್ದ ಈ ರೀತಿ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿ, ಈ ಹೇಳಿಕೆಯನ್ನು ಇಡೀ ಸಮುದಾಯಕ್ಕೆ ಅವಮಾನವೆಂದು ಪರಿಗಣಿಸುವ ಹಾಗೇ ಮಾಡಿರುವುದಾಗಿದೆ ಎಂದವರು ಹೇಳಿದರು.
‘ನನಗೆ ವಿಶ್ವಕರ್ಮ ಸಮುದಾಯದವರ ಬಗ್ಗೆ ಗೌರವವಿದೆ. ನನ್ನ ಮನೆ ಕಟ್ಟಿರುವುದು ಅವರೇ, ಅವರ ಸ್ನೇಹದಲ್ಲೇ ಬೆಳೆದವ. ಈಗಲೂ ಅನೇಕರು ಸ್ನೇಹಿತರಿದ್ದಾರೆ. ಇದು ಇಡೀ ವಿಶ್ವಕರ್ಮ ಸಮುದಾಯದ ಆಕ್ರೋಶವಲ್ಲ. ಕೆಲವೇ ಕೆಲವು ಜನರ ಕೈವಾಡವಷ್ಟೇ. ಅನವಶ್ಯಕವಾಗಿ ಕೆಲವರು ಗೊಂದಲ ಸೃಷ್ಟಿಸಿ, ದ್ವೇಷ ಭಾವನೆ ಹುಟ್ಟಿಸುವ ಹುನ್ನಾರ ಮಾಡಿದಂತಿದೆ. ಇದರೊಂದಿಗೆ ಇತ್ತೀಚೆಗೆ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಿದ್ದನ್ನು ಸಹಿಸದೇ ಕೆಲವರು ಈ ರೀತಿ ವಿಕೃತಿ ಮಾಡಿರಬಹುದು’ ಎಂದವರು ಹೇಳಿದರು.
ಸಾಲಿಗ್ರಾಮದಲ್ಲಿ ನಡೆದ ಆ ಸಭೆಗೆ ಅವರ ಆಹ್ವಾನದಂತೆ ವೇದಿಕೆಗೆ ಹೋಗಿದ್ದೆ. ಕ್ಷಮೆಯಾಚನೆಗೆ ಹೋಗಿದ್ದಲ್ಲ. ಸಮಾಧಾನಪಡಿಸಲು ಮಾತ್ರ ಹೋಗಿದ್ದು. ಅಲ್ಲಿನ ಕೆಲವರ ಭಾವನೆ ಕಂಡು ಒಂದು ಕ್ಷಣ ಆತಂಕಗೊಂಡಿದ್ದೆ. ಅದಕ್ಕಾಗಿ ಅಲ್ಲಿಂದ ಹೊರಗೆ ಬರುವುದಕ್ಕೆ ಅಷ್ಟೇ, ನಿಮಗೆ ಬೇಜಾರು ಆಗಿದ್ದಕ್ಕೆ ವಿಷಾದವಿದೆ. ಅದನ್ನು ಕ್ಷಮೆಯೆಂದು ಸ್ವೀಕಾರ ಮಾಡಿದರೂ ಅಡ್ಡಿಯಿಲ್ಲ ಎನ್ನುವುದಾಗಿ ಹೇಳಿ, ಹೊರಗೆ ಬಂದಿದ್ದೆ. ಬಳಿಕ ವ್ಯಕ್ತವಾದ ಅನೇಕರ ಅಭಿಮಾನ ಸಮಾಧಾನ ತಂದಿದೆ. ಎಲ್ಲರೂ ನನಗೆ ಬೆಂಬಲವಾಗಿದ್ದಾರೆ ಎಂದವರು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಹೆಬ್ಬಾರ್ ಅವರನ್ನು ಸಭೆಗೆ ಕರೆದು, ಅಲ್ಲಿ ಅವಮಾನ ಮಾಡಿರುವುದು ಖಂಡನೀಯ. ಈ ಬಗ್ಗೆ ಸಾಹಿತ್ಯ ಪರಿಷತ್ ವತಿಯಿಂದ ಅ.11ರಂದು ಸಾಲಿಗ್ರಾಮದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
‘ಆಚಾರ್’ ಎಂಬುದು ನಿರ್ದಿಷ್ಟ ಜಾತಿ ಸೂಚಿಸುವ ಪದವಲ್ಲ. ಬ್ರಾಹ್ಮಣರು ಸೇರಿದಂತೆ ವಿವಿಧ ಸಮುದಾಯ ಗಳಲ್ಲಿಯೂ ಈ ಪದ ಬಳಕೆಯಲ್ಲಿದೆ. ಇನ್ನು ಹೆಬ್ಬಾರ್ ಅವರನ್ನು ಸಭೆಗೆ ಆಹ್ವಾನಿಸಿ ಅವಮಾನಿಸಿರುವುದು ಅಕ್ಷಮ್ಯ. ಇದು ಇಡೀ ಬ್ರಾಹ್ಮಣ ಸಮಾಜಕ್ಕೆ ನೋವುಂಟು ಮಾಡಿದೆ. ಜಿಲ್ಲಾ ಬ್ರಾಹ್ಮಣ ಮಹಾಸಭೆ ಇದನ್ನು ಖಂಡಿಸುತ್ತದೆ. ಆ ಸಭೆ ಆಯೋಜಿಸಿದವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭೆ ಜಿಲ್ಲಾಧ್ಯಕ್ಷ ಸಂದೀಪ್‌ಕುಮಾರ್ ಮಂಜ ಆಗ್ರಹಿಸಿದರು.
ಸಾಹಿತಿ ವೈದೇಹಿ, ಕಸಾಪ ಕಾರ್ಕಳ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಬ್ರಾಹ್ಮಣ ಮಹಾಸಭಾದ ವಾದಿರಾಜ್ ಹೆಬ್ಬಾರ್ ಮಾತನಾಡಿದರು. ಬ್ರಾಹ್ಮಣ ಮಹಾಸಭಾದ ಕುಂದಾಪುರ ತಾಲೂಕು ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕಲಾಕ್ಷೇತ್ರ ಕುಂದಾಪುರದ ಕಿಶೋರ್‌ಕುಮಾರ್, ಶ್ರೀಧರ ಪಿ.ಎಸ್. ಸುದ್ದಿಗೋಷ್ಠಿ ಉಪಸ್ಥಿತರಿದ್ದರು.
ಬಹಿರಂಗ ಕ್ಷಮೆಯಾಚನೆಗೆ ಆಗ್ರಹ: ವಿಶ್ವಕರ್ಮ ಸಮುದಾಯದವರು ಮಾತುಕತೆಗೆಂದು 87 ವರ್ಷ ಪ್ರಾಯದ ಹಿರಿಯ ವಕೀಲ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್‌ರನ್ನು ಸಾಲಿಗ್ರಾಮಕ್ಕೆ ಕರೆಸಿ ಅಲ್ಲಿ ಅವರ ವಿರುದ್ಧ ಅವಹೇಳನಕರ ವಾಗಿ ಮಾತನಾಡಿ ಅವಮಾನ ಮಾಡಿದ್ದಕ್ಕೆ ಹಾಗೂ ಅವರನ್ನು ಏಕವಚನದಲ್ಲಿ ಬೈದಿರುವುದನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಹಾಸಭಾದ ಅಧ್ಯಕ್ಷ ಸಂದೀಪ್‌ಕುಮಾರ್ ಮಂಜ ಹೇಳಿದರು.
ನಮ್ಮ ಸಮುದಾಯದ ಹಿರಿಯ ವ್ಯಕ್ತಿಯೊಬ್ಬರ ಮೇಲೆ ಸುಳ್ಳು ಆರೋಪ ಮಾಡಿ ಅವರಿಗೆ ಮಾನಸಿಕ ಹಿಂಸೆ ನೀಡಿರುವುದು ಅಕ್ಷಮ್ಯ ಅಪರಾಧ. ಎಎಸ್‌ಎನ್ ಹೆಬ್ಬಾರ್‌ರನ್ನು ಕರೆದ ಅವಹೇಳನ ಮಾಡಿದವರು, ಏಕವಚನದಲ್ಲಿ ಮಾತನಾಡಿದವರು, ಅವರಿಗೆ ಮಾನಸಿಕ ಹಿಂಸೆ ನೀಡಿದವರು ವಿಶ್ವಕರ್ಮ ಸಮಾಜದ ಪರವಾಗಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಗಣೇಶ ರಾವ್ ಕುಂಭಾಶಿ, ಶ್ರೀನಿವಾಸ ಬಲ್ಲಾಳ್, ಜಯರಾಮ ಆಚಾರ್ಯ, ನಾಗರಾಜ ಉಪಾಧ್ಯಾಯ, ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿದ್ದರು.






