ಬಾಲಕಿಯರ ಪ.ಪೂ.ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ಶಿಬಿರ

ಉಡುಪಿ: ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಗುರುವಾರ ನಗರದ ಜಿಲ್ಲಾ ತರಬೇತಿ ಮತ್ತು ಶಿಕ್ಷಣ ಸಂಸ್ಥೆ (ಡಯಟ್) ಯಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾದ್ಯಕ್ಷೆ ನಿರುಪಮಪ್ರಸಾದ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ಮೌಲ್ಯಗಳನ್ನು ಗಟ್ಟಿ ಗೊಳಿಸುವಲ್ಲಿ ಎನ್ನೆಸ್ಸೆಸ್‌ನ ಪಾತ್ರ ದೊಡ್ಡದು. ಇಂದಿನ ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವುದು ನಿರಂತರವಾಗಿರಬೇಕು, ಸ್ವಚ್ಛತೆ ಹೊರಗಷ್ಟೇ ಅಲ್ಲ, ನಮ್ಮ ಮನಸ್ಸನ್ನು ಸ್ವಚವಾಗಿರಿಸಿಕೊಳ್ಳಬೇಕು. ಇದಕ್ಕಾಗಿ ಯುವಜನತೆ ಜಾತಿ, ಮತ, ಬೇಧಗಳನ್ನು ಮರೆತು ಒಗ್ಗಟ್ಟಾಗಿರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಜಗದೀಶ್‌ಕುಮಾರ್ ಮಾತನಾಡಿ, ಎನ್ನೆಸ್ಸೆಸ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಪೋಷಿಸುವಲ್ಲಿ ಪರಿಣಾಮಕಾರಿ ವೇದಿಕೆಯಾಗಿದೆ. ಇಂತಹ ಚಟುವಟಿಕೆಗಳಿಂದ ಯುವಶಕ್ತಿ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ದಿನೇಶ್ ಹಿಂಬಾಳೆ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಇಂದಿರಾ ಮಾತನಾಡಿದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಶುಭಗೀತಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಹಿರಿಯ ಉಪನ್ಯಾಸಕ ಗಂಗಾಧರ್ ವಿ.ಎ. ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಪ್ರೇಮಾ ಬಿ. ವಂದಿಸಿದರು.






