ಕಾರ್ಕಳ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರ ತೇಜೋವಧೆ ಖಂಡಿಸಿ ಡಿಸಿಗೆ ಮನವಿ

ಉಡುಪಿ, ಅ.9: ಕಾರ್ಕಳದಲ್ಲಿ ಅ.8ರಂದು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಮತ್ತು ನಾಯಕರ ವಿರುದ್ಧ ನಡೆದ ವೈಯಕ್ತಿಕ ತೇಜೋವಧೆಯನ್ನು ಖಂಡಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನ್ಯಾಯ ಸಮ್ಮತ ಪ್ರತಿಭಟನೆ ಮತ್ತು ಹೋರಾಟಗಳಿಗೆ ಮುಕ್ತ ಅವಕಾಶವನ್ನು ಸಂವಿಧಾನ ನೀಡಿದೆ. ಅದರೆ ಯಾವುದೇ ಒಂದು ನಿರ್ದಿಷ್ಟ ವಿಷಯ ಅಥವಾ ಬೇಡಿಕೆಗಳ ಚೌಕಟ್ಟು ಮತ್ತು ನಾಗರಿಕ ಸಮಾಜದ ಸಭ್ಯತೆಯನ್ನು ಮೀರಿ ಕಾರ್ಕಳ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಕಾರ್ಕಳ ಶಾಸಕರ ಸಹಿತ ಜಿಲ್ಲೆಯ ಸಂಸದರು, ಶಾಸಕರು ಮತ್ತು ಬಿಜೆಪಿ ಮುಖಂಡರ ವೈಯಕ್ತಿಕ ನಿಂದನೆಗೈದು ಅವರ ಕೌಟುಂಬಿಕ ವಿಚಾರ ಗಳನ್ನೂ ಎಳೆದು ತಂದು ಕೀಳು ಮಟ್ಟದ ಪದ ಪ್ರಯೋಗದೊಂದಿಗೆ ಅವಮಾನಿಸಿರುವುದನ್ನು ಸರ್ವತಾ ಒಪ್ಪಲಾಗದು ಎಂದು ಮನವಿಯಲ್ಲಿ ದೂರಲಾಗಿದೆ.
ಪದೇ ಪದೇ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಸಹಿತ ಸತ್ಯಕ್ಕೆ ದೂರವಾದ ಅಸಂಬದ್ಧ ವಿಚಾರಗಳನ್ನೇ ಬಂಡವಾಳವನ್ನಾಗಿರಿಸಿಕೊಂಡು ಪ್ರತಿಭಟನೆಯ ಪ್ರಹಸನದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಮತ್ತು ಪಕ್ಷದ ನಾಯಕ ರನ್ನು ಅವಾಚ್ಯ ಪದಗಳಿಂದ ತೆಗಳಿ, ಹೀಯಾಳಿಸಿ, ಮೋಜು ಮಸ್ತಿ ಮಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ವಾಗುವಂತಹ ಇಂತಹ ವಸ್ತುನಿಷ್ಠವಲ್ಲದ ಪ್ರತಿಭಟನಾ ಸಭೆಗಳಿಗೆ ಜಿಲ್ಲೆಯಾದ್ಯಂತ ಯಾವುದೇ ಅವಕಾಶಗಳನ್ನು ನೀಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಮುಖಂಡರ ಕುರಿತು ವಿಜೃಂಭಿಸುವ ವಿಕೃತ ಪೋಸ್ಟ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಪ್ರಮುಖರಾದ ನೀತಾ ಪ್ರಭು, ಮಂಜುಳಾ ಪ್ರಸಾದ್, ಉಷಾ ಪ್ರಕಾಶ್ ಶೆಟ್ಟಿ, ಜ್ಯೋತಿ ಉದಯ ಪೂಜಾರಿ, ನಳಿನಿ ಪ್ರದೀಪ್ ರಾವ್, ಶೋಭಾ ಭಾಸ್ಕರ್, ಸುಜಾಲ ಸತೀಶ್, ಮಾಲಿನಿ ಶೆಟ್ಟಿ, ಜ್ಯೋತಿ ರಮೇಶ್, ನಿರ್ಮಲಾ ಶೆಟ್ಟಿ, ಮಾಲಿನಿ ಜತ್ತನ್ನ, ವಿದ್ಯಾ ಶ್ಯಾಮಸುಂದರ್, ತ್ರಿವೇಣಿ ಅಮೀನ್, ರಮ್ಯಾ ರಾವ್, ಜ್ಯೋತಿ, ವಿನಯಾ ಡಿ.ಬಂಗೇರ, ವಿನುತಾ ಆಚಾರ್ಯ, ಭಾರತಿ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.






