ಕುಂದಾಪುರ | ದೆಹಲಿ ಹೋರಾಟಗಾರರ ಬಂಧನ ವಿರುದ್ದ ಡಿವೈಎಫ್ಐ ಪ್ರತಿಭಟನೆ

ಕುಂದಾಪುರ: ಎಸ್‌ಐಆರ್ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸಿ, ಬಂಧಿಸಿ ಶಿಕ್ಷಿಸಬೇಕು ಎಂದು ಆಗ್ರಹಿಸಿ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ನೇತೃತ್ವದಲ್ಲಿ ಶುಕ್ರವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಮುಖಂಡ ರವಿ ವಿ.ಎಂ. ಅವರು, ಕೇಂದ್ರ ಸರ್ಕಾರವು ಅಧಿಕಾರದ ಹಿತಾಸಕ್ತಿಗಾಗಿ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಸಾಂವಿಧಾನಿಕ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊ ಳ್ಳುತ್ತಿದೆ ಎಂದು ಆರೋಪಿಸಿದ್ದು ಎಸ್‌ಐಆರ್ ರದ್ದುಗೊಳಿಸದಿದ್ದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅಪಾಯ ಎದುರಾಗಲಿದೆ. ಸಂವಿಧಾನವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಇಂತಹ ಹೋರಾಟಗಳು ಇನ್ನಷ್ಟು ತೀವ್ರಗೊಳ್ಳಬೇಕು ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ನಡೆಸಲು ದೆಹಲಿಗೆ ತೆರಳುತ್ತಿರುವ ಹೋರಾಟಗಾರರನ್ನು ಬಂಧಿಸುತ್ತಿರು ವುದು ಹಾಗೂ ಅವರ ಪ್ರಯಾಣಕ್ಕೆ ಅಡ್ಡಿಪಡಿಸುತ್ತಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಇಂತಹ ಪ್ರಜಾ ಪ್ರಭುತ್ವ ವಿರೋಧಿ ಕ್ರಮಗಳನ್ನು ತೀವ್ರವಾಗಿ ಖಂಡಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಹಯವದನ ಮೂಡಸಗ್ರಿ ಅವರು, ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳಲ್ಲಿ ಒಂದಾದ ಚುನಾವಣಾ ಆಯೋಗವು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಿದೆ. ಆದರೆ, ಚುನಾವಣಾ ಆಯೋಗವನ್ನು ಬಿಜೆಪಿ ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯನ್ನಾಗಿ ಮಾಡಿರುವುದು ದುರಂತ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್‌ಐ ಅಧ್ಯಕ್ಷ ವಿಶ್ವನಾಥ್, ರಾಜ ಬಿ.ಟಿ.ಆರ್. ಉದಯ ಟೈಲರ್, ಗಣೇಶ್ ಕಲ್ಲಾಗರ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ ಮತ್ತು ಬಲ್ಕೀಸ್, ದಲಿತ ಹಕ್ಕುಗಳ ಸಮಿತಿಯ ನಾಗರತ್ನ ಆರ್., ಪ್ರಕಾಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.
ಡಿವೈಎಫ್‌ಐ ಕಾರ್ಯದರ್ಶಿ ಗಣೇಶ್ ಬಿಟಿಆರ್ ಸ್ವಾಗತಿಸಿದರು. ಡಿವೈಎಫ್‌ಐ ಉಪಾಧ್ಯಕ್ಷ ಮಂಜುನಾಥ್ ಶೋಗನ್ ವಂದಿಸಿದರು.






