ನವರಾತ್ರಿ ಆರಂಭ, ’ಹೊಸ್ತು’ ಹಬ್ಬ: ಸಂತೆಯಲ್ಲಿ ಖರೀದಿ ಜೋರು

ಕುಂದಾಪುರ, ಅ.10: ಕುಂದಾಪುರ, ಬೈಂದೂರು ತಾಲೂಕು ಸೇರಿದಂತೆ ಉಡುಪಿ ಜಿಲ್ಲೆಯಾದ್ಯಂತ ರವಿವಾರದಿಂದ ಹೊಸ್ತು ಹಬ್ಬ ಹಾಗೂ ಮೊದಲ ನವರಾತ್ರಿ ಆರಂಭಗೊಳ್ಳುತ್ತಿರುವುದರಿಂದ ಶನಿವಾರ ಉಡುಪಿ ಹಾಗೂ ಕುಂದಾಪುರದ ವಾರದ ಸಂತೆಯಲ್ಲಿ ಹೂವು, ಹಣ್ಣು, ತರಕಾರಿ ಖರೀದಿ ಅಬ್ಬರ ಜೋರಾಗಿತ್ತು. ಸಂಜೆ ವೇಳೆಗೆ ಮಳೆಯ ವಾತಾವಾರಣ ಇದ್ದರೂ ಸಂತೆಯಲ್ಲಿ ಜನಜಂಗುಳಿ ಇತ್ತು.
ಬೆಳಗ್ಗೆಯಿಂದಲೇ ಕುಂದಾಪುರ, ಬೈಂದೂರು ಭಾಗದಿಂದ ವಾರದ ಸಂತೆಗೆ ಆಗಮಿಸಿದ ಜನ ಮನೆಗೆ ಹೊಸ್ತು ಹಬ್ಬಕ್ಕೆ, ನವರಾತ್ರಿಗೆ ಬೇಕಾದ ಅಗತ್ಯ ದಿನಸಿ ವಸ್ತು, ತರಕಾರಿ, ಹೂವು, ಹಣ್ಣುಗಳನ್ನು ಖರೀದಿ ಮಾಡುತ್ತಿದ್ದು ಪ್ರತೀ ವಾರದ ಸಂತೆಗಿಂತ ಈ ವಾರ ಸ್ವಲ್ಪ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದರು.
ಹೊಸ್ತು ಹಬ್ಬಕ್ಕೆ ಬೇಕಾದ ಅಮ್ಟೆ(ಅಂಬಟೆ) ಕಾಯಿ, ಹಾಗಲಕಾಯಿ, ಮುಳ್ಳು ಸೌತೆ, ಸುವರ್ಣಗಡ್ಡೆ, ಇನ್ನಿತರ ತರಕಾರಿ ಖರೀದಿಗೆ ಎಲ್ಲ ಕಡೆಗಳಲ್ಲಿ ಜನ ಮುಗಿ ಬಿದ್ದರು. ಅಮ್ಟೆ ಕಾಯಿ ಕೆಜಿಗೆ 100ರೂ. ಇದ್ದರೆ, ಹಾಗಲ ಕಾಯಿಗೆ ಕೆಜಿಗೆ 60-70 ರೂ. ಇತ್ತು. ಮುಳ್ಳುಸೌತೆಗೆ 50 -60 ರೂ. ದರದಲ್ಲಿ ಮಾರಾಟ ಆಗುತ್ತಿತ್ತು. ಕೊತ್ತಂಬರಿ ಸೊಪ್ಪಿಗೆ ಬೆಳಗ್ಗೆ ಕೆಜಿಗೆ 100 ರೂ. ಇತ್ತು, ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ಕೊರತೆ ಉಂಟಾದ ಕಾರಣಕ್ಕೆ ಅನಂತರ 150 ರೂ. ಗೆ ಏರಿಕೆಯಾದರೆ, ಸಂಜೆಯ ವೇಳೆಗೆ ಆಗುವಾಗ 200 ರೂ. ಗೂ ಏರಿಕೆಯಾಗಿತ್ತು ಎಂದು ವರ್ತಕ ಮಾಧವ ಪ್ರಭು ತಲ್ಲೂರು ತಿಳಿಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಹೂವಿನ ದರವೂ ಏರಿಕೆಯಾಗಿದೆ. ಸೇವಂತಿಗೆ ಮಾರಿಗೆ 100 ರೂ., ಕೆಂಪು ಸೇವಂತಿಗೆಗೆ 160-180ರೂ., ತುಳಸಿ 100 ರೂ., ಬಿಳಿ ಸೇವಂತಿಗೆ, ಗುಲಾಬಿ ಕಟ್ಟಿರುವುದಕ್ಕೆ 160-180 ರೂ., ಗೊಂಡೆ ಹೂವಿಗೆ 80 ರೂ., ಕಾಕಡಕ್ಕೆ 130-150 ರೂ., ಕಣಗಿಲೆ 120-130 ರೂ. ದರದಲ್ಲಿ ಕುಂದಾಪುರ ಭಾಗದಲ್ಲಿ ಮಾರಾಟ ಆಗುತ್ತಿತ್ತು.
ತಮ್ಮ ಗದ್ದೆಗಳಲ್ಲಿ ಬೆಳೆದ ಹೊಸ ಫಸಲನ್ನು ಮನೆ ತುಂಬಿಸುವ ಆಚರಣೆಯಾದ ಹೊಸ್ತು (ಕದಿರು ಕಟ್ಟುವ ಹಬ್ಬ) ಹಬ್ಬವನ್ನು ಕುಂದಾಪುರ ಭಾಗದಲ್ಲಿ ಬಹುತೇಕ ಎಲ್ಲ ಮನೆಗಳಲ್ಲಿ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಈ ಬಾರಿ ಅ.11ರ ನವರಾತ್ರಿಯ ಆರಂಭದಂದು ಶುರುವಾಗಿ ಮುಂದಿನ ವಾರದಲ್ಲಿ ಕುಂದಾಪುರ ಹಾಗೂ ಬೈಂದೂರಿನ ಬಹುತೇಕ ಎಲ್ಲ ಕಡೆಗಳಲ್ಲಿ ಹೊಸ್ತುಆಚರಿಸಲಾಗುತ್ತಿದೆ. ನವರಾತ್ರಿ ಹಾಗೂ ಹೊಸ್ತು ಹಬ್ಬದ ಹಿನ್ನೆಲೆಯಲ್ಲಿ ಕಳೆದ 2-3 ದಿನಗಳಿಂದ ತರಕಾರಿಗಳ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ. ತರಕಾರಿ ದರ ದಿನೇ ದಿನೇ ಏರಿಳಿತಗಳಾಗುತ್ತಿದೆ.






