ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ: ಮಾವಳ್ಳಿ ಶಂಕರ್

ಉಡುಪಿ, ಅ.10: ದೇಶದಲ್ಲಿ ಎಲ್ಲಾ ಕಡೆಗಳಲ್ಲೂ ಮಹಿಳೆಯರ ಮೇಲೆ ಶೋಷಣೆ, ಅತ್ಯಾಚಾರ, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ನಮ್ಮ ಕರ್ನಾಟದಲ್ಲೂ ಮಹಿಳೆಯರನ್ನು ಶೋಷಿಸುತ್ತಲೇ ಬರಲಾಗುತ್ತಿದೆ. ಮಹಿಳೆಯರ ಶೋಷಣೆಯ ವಿರುದ್ಧ ಹೋರಾಟವನ್ನು ಪ್ರೊ.ಕೃಷ್ಣಪ್ಪನವರು ಆರಂಬಿಸಿದರು. ದಲಿತ ಸಂಘರ್ಷ ಸಮಿತಿ ಎಂಬ ಸಂಘಟನೆ ಕಟ್ಟಿ ಶೋಷಿತರ ಪರ ಧ್ವನಿಯಾದರು ಎಂದು ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಚಿಕ್ಕಮಗಳೂರಿನ ಮಹಾರಾಜ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ರಾಜ್ಯ ಮಹಿಳಾ ಸರ್ವ ಸದಸ್ಯರ ಸಭೆ ಮತ್ತು ಮಹಿಳಾ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಹಿಳೆಯರ ಶೋಷಣೆಗಳಾದ ದೇವದಾಸಿ ಪದ್ಧತಿ, ಚಂದ್ರಗುತ್ತಿಯ ಬೆತ್ತಲೆ ಸೇವೆಯಂತಹ ಅನಿಷ್ಟ ಪಧ್ಧತಿಯ ವಿರುದ್ಧ ಹೋರಾಟ ನಡೆಸಿದ ದಲಿತ ಸಂಘರ್ಷ ಸಮಿತಿ ಅದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಯಿತು. ಅಲ್ಲಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿದ್ದು ಇದರ ವಿರುದ್ಧ ಸಾಮಾಜವನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪನವರು ಹುಟ್ಟು ಹಾಕಿದ ದಲಿತ ಸಂಘರ್ಷ ಸಮಿತಿಯು ಒಂದು ಕಾಲದಲ್ಲಿ ಇಡೀ ವಿಧಾನಸೌಧವನ್ನೇ ಅಲುಗಾಡಿಸು ವಷ್ಟು ಬಲ ಹೊಂದಿತ್ತು. ಬೆತ್ತಲೆ ಸೇವೆಯಂತಹ ಅನಿಷ್ಟ ಪಧ್ಧತಿಯ ವಿರುದ್ಧ ಬಪವಲಿಂಗಪ್ಪನವರು ರಾಮಕೃಷ್ಣ ಹೆಗಡೆಯವರಿಗೆ ಮನವರಿಕೆ ಮಾಡಿ ವಿರೋಧಿಸಿದ ರೀತಿ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ ಎಂದರು.
ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ಮುಖಂಡರಾದ ಇಂದಿರಾ ಕ್ರಷ್ಣಪ್ಪ, ರಮೇಶ ಡಾಕುಳಕಿ, ಮರ್ಲೆ ಅಣ್ಣಯ್ಯ, ಸಿಧ್ಧರಾಜು, ವಸಂತಿ ಶಿವಾನಂದ, ಕುಸುಮಕ್ಕ ಗುಜ್ಜರಬೆಟ್ಟು, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಉಡುಪಿ ಜಿಲ್ಲಾ ಮಹಿಳಾ ಓಕ್ಕೂಟದ ಸಂಚಾಲಕಿ ಸುಂದರಿ ಪುತ್ತೂರು, ಗೀತಾ ಸುರೇಶ್, ಚೈತ್ರ ಬೈಂದೂರು, ಇಂದಿರಾ ಬೈಂದೂರು, ಸರೋಜ ಗುಜ್ಜರಬೆಟ್ಟು, ಸುನೀತಾ ಕಾಪು, ಕಾವ್ಯಾ, ಅಸ್ಮಿತಾ, ನಾಗಮ್ಮ ಬೈಂದೂರು, ಗುಲಾಬಿ ಕೆಮ್ಮಣ್ಣು ಮೊದಲಾದವರು ಉಪಸ್ಥಿತರಿದ್ದರು.






