ನಾಲ್ವರು ಹಿರಿಯ ನಾಗರಿಕರ ಸಂಬಂಧಿಕರ ಪತ್ತೆಗೆ ಮನವಿ

ಉಡುಪಿ, ಅ.10: ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ವರು ಹಿರಿಯ ನಾಗರಿಕರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಇವರ ಸಂಬಂಧಿಕರ ಪತ್ತೆಗೆ ಮನವಿ ಮಾಡಲಾಗಿದೆ.
ಕಾಂತಪ್ಪ ಪೂಜಾರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಇವರು ತಮ್ಮ ವಿಳಾಸವನ್ನು 19-15, ಸಾಯಿ ಸನ್ನಿಧಿ, ಮಧ್ವನಗರ, ಮೂಡುಬೆಟ್ಟು, ಕೊಡವೂರು, ತೆಂಕನಿಡಿಯೂರು, ಉಡುಪಿ ಎಂದು ತಿಳಿಸಿದ್ದಾರೆ. ತಮ್ಮ ಪತ್ನಿ ಶಾರದಾ ಪೂಜಾರಿ ಇದೇ ವಿಳಾಸದಲ್ಲಿ ವಾಸವಾಗಿದ್ದು, ತಮ್ಮ ಮಗಳು ಮಲ್ಲಿಕಾ ದೆಹಲಿಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಆದರೆ, ಮಗಳ ವಿಳಾಸದ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿರುವುದಿಲ್ಲ.
ಕೆ.ಸೀನಾ(75) ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಇವರು ತಮ್ಮ ವಿಳಾಸವನ್ನು ದೇವಿಪ್ರಸಾದ್, 5ನೇ ನೆಯಂ ಪಳ್ಳಿ, ಸಂತೇಕಟ್ಟೆ, ಉಡುಪಿ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮನ್ನು ತಮ್ಮ ಸಹೋದರ ಗೋಪಾಲ್ ನಾಯ್ಕ್ ಅವರು ನೋಡಿಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಉಪೇಂದ್ರ ನಾಯ್ಕ್(70) ಎಂಬವರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಇವರು ತಮ್ಮ ವಿಳಾಸವನ್ನು ಹಾಲಾಡಿ, ಸಿದ್ದಾಪುರ, ಎಸ್‌ಬಿಐ ಬ್ಯಾಂಕ್ ಹತ್ತಿರ ಎಂದು ತಿಳಿಸಿದ್ದಾರೆ. ಅಲ್ಲದೆ, ತಮಗೆ ಪೂಜಾ ಭಟ್ ಎಂಬ ಮಗಳಿದ್ದು, ಅವರ ಪತಿಯ ಹೆಸರು ಗುರುಭಟ್ ಎಂದು ತಿಳಿಸಿದ್ದಾರೆ.
ಆನಂದ(70) ಎಂಬವರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಇವರು ತಮ್ಮ ವಿಳಾಸವನ್ನು ಕಳತ್ತೂರು, ಸಂತೇಕಟ್ಟೆ, ನಾಗರಾಜ್ ಸೂಡ ಬಾರ್ ಹತ್ತಿರ, ಕರ್ಜೆ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಎಂದು ತಿಳಿಸಿದ್ದಾರೆ. ಇವರ ಪತ್ನಿಯ ಹೆಸರು ಪ್ರಭಾ ಹಾಗೂ ಮಕ್ಕಳ ಹೆಸರು ಸುಧಾ ಮತ್ತು ಸುಧೀರ್ ಎಂದು ತಿಳಿಸಿದ್ದಾರೆ.
ಈ ಹಿರಿಯ ನಾಗರಿಕರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಿಗಾದರೂ ಇವರ ಬಗ್ಗೆ ಮಾಹಿತಿ ತಿಳಿದಿದ್ದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ.






