ಮತ್ಸ್ಯಗಂಧ ಸೇರಿ ಕೊಂಕಣ ರೈಲಿನಲ್ಲಿ ಕಳ್ಳತನ ತಡೆಯಲು ಆಗ್ರಹ

ಉಡುಪಿ: ಮಂಗಳೂರು-ಮುಂಬೈ ಪ್ರಯಾಣದ ಮತ್ಸ್ಯಗಂಧ ರೈಲು ಸೇರಿದಂತೆ, ಸಿಎಸ್‌ಟಿ ಮತ್ತು ಇನ್ನಿತರ ರೈಲು ಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ಕಳ್ಳತನ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದ್ದು, ರತ್ನಗಿರಿ ನಿಲ್ದಾಣದ ಬಳಿ ಪ್ರಯಾಣಿಕರನ್ನು ಅತಿ ಹೆಚ್ಚು ಲೂಟಿ ಮಾಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಕೇಳಿ ಬರುತ್ತಿವೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಆದ್ದರಿಂದ ಕೇಂದ್ರ ರೈಲ್ವೆ ಸುರಕ್ಷತಾ ಇಲಾಖೆ ತಕ್ಷಣ ಕ್ರಮ ಜರುಗಿಸಿ ಪ್ರಯಾಣಿಕರಿಗೆ ಭದ್ರತೆ ಒದಗಿಸಬೇಕೆಂದು ಅವರು ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಹೊಸದಿಲ್ಲಿಯಲ್ಲಿ ಕೇಂದ್ರ ರೈಲ್ವೆ ಬೋರ್ಡಿನ ಸುರಕ್ಷತಾ ವಿಭಾಗದ ಮಹಾನಿರ್ದೇಶಕಿ ಸೋನಿಯಾ ಶರ್ಮಾರನ್ನು ಭೇಟಿಯಾಗಿ ಕೋಟ ಈ ಬಗ್ಗೆ ಲಿಖಿತ ಮಾಹಿತಿ ನೀಡಿದರು.
ರೈಲಿನಲ್ಲಿ ಅಗತ್ಯವಿರುವ ಕಡೆ ಸಿಸಿಟಿವಿ ಅಳವಡಿಕೆ ಮತ್ತು ಇದುವರೆಗೂ ನಡೆದ ವ್ಯವಸ್ಥಿತ ಸಂಘಟಿತ ಅಪರಾಧ ಮಾದರಿಯ ಕಳ್ಳತನದ ಸಮಗ್ರ ತನಿಖೆ ನಡೆಸಬೇಕೆಂದು, ಅಗತ್ಯಬಿದ್ದರೆ ನಾಲ್ಕು ರಾಜ್ಯಗಳ ಸಹಯೋಗದೊಂದಿಗೆ ತನಿಖಾ ತಂಡ ರಚಿಸಬೇಕೆಂದು ಸಂಸದ ಕೋಟ ಕೋರಿಕೆ ಸಲ್ಲಿಸಿದರು.
ಹಿರಿಯ ಅಧಿಕಾರಿ ಸೋನಿಯ ಶರ್ಮ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಪರಾಧಗಳ ಪತ್ತೆಗೆ ತಕ್ಷಣ ಸೂಕ್ತ ಕ್ರಮ ಜರುಗಿಸುವಂತೆ ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ನಿರ್ದೇಶ ನೀಡಿದರು.






