‘ಸಾಮರ್ಥ್ಯಕ್ಕೆ ಮೀರಿದ ನಿರೀಕ್ಷೆ ಯುವಜನರಲ್ಲಿ ಖಿನ್ನತೆಗೆ ಕಾರಣ’

ಉಡುಪಿ, ಅ.12: ಉಡುಪಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್), ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಮನೋವೈದ್ಯಕೀಯ ವಿಭಾಗ ಹಾಗೂ ಸಂತೆಕಟ್ಟೆ ಲಯನ್ಸ್ ಕ್ಲಬ್‌ಗಳ ಸಹಯೋಗದಲ್ಲಿ ‘ನೈಜ ಧ್ವನಿಗಳು, ನೈಜ ಬದಲಾವಣೆ’ ಎಂಬ ಆಶಯದಡಿಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಸೋಮವಾರ ಕಾಲೇಜಿನ ಸ್ನಾತಕೋತ್ತರ ವಿಭಾಗದ ಎವಿ ಸಭಾಂಗಣದಲ್ಲಿ ಆಚರಿಸಲಾಯಿತು.
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಮಾನಸಿಕ ಆರೋಗ್ಯ (ಮನೋವೈದ್ಯಕೀಯ) ವಿಭಾಗದ ಉಪನ್ಯಾಸಕಿ ಪ್ರತಿಭಾ ಲಿಡಿಯಾ ಬ್ರಾಗ್ಸ್ ಮಾತನಾಡಿ, ಸಾಮರ್ಥ್ಯಕ್ಕೆ ಮೀರಿದ ನಿರೀಕ್ಷೆಗಳು ಯುವಜನರಲ್ಲಿ ಭ್ರಮೆ ಹಾಗೂ ಖಿನ್ನತೆಗೆ ಕಾರಣವಾಗಬಹುದು. ಆರಂಭಿಕ ಆಕರ್ಷಣೆಯನ್ನು ಜೀವನಪರ್ಯಂತದ ಬಾಂಧವ್ಯವೆಂದು ತಪ್ಪಾಗಿ ಭಾವಿಸಬಾರದು ಎಂದು ಹೇಳಿದರು.
ಫ್ಲಾವಿಯಾ ಶಾರ್ಲೆಟ್ ನೊರೊನ್ಹಾ ಮಾತನಾಡಿ, ಕೋಪ, ಆತಂಕ ಮತ್ತು ಖಿನ್ನತೆಯಂತಹ ಭಾವನೆಗಳನ್ನು ನಿಭಾಯಿಸಲು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ನಿರಂತರವಾಗಿ ಮೊಬೈಲ್ ವೀಕ್ಷಿಸುವುದ ಕ್ಕಿಂತ ದೈಹಿಕ ಚಟುವಟಿಕೆಗಳ ಮೂಲಕ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಪ್ರೊ.ನಿಕೇತನ ಮಾತನಾಡಿ, ಇಂದಿನ ದಿನಗಳಲ್ಲಿ ಇತರರ ಮಾತುಗಳನ್ನು ತಾಳ್ಮೆಯಿಂದ ಆಲಿಸುವ ಗುಣ ಅತ್ಯಂತ ಮುಖ್ಯವಾಗಿದೆ. ಮಾನಸಿಕ ಆರೋಗ್ಯದ ಸಮಸ್ಯೆಗಳ ಕುರಿತು ದಿನದಿಂದ ದಿನಕ್ಕೆ ಕಳವಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಹೇಳಿದರು.
ಸಂತೆಕಟ್ಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಎಡ್ವರ್ಡ್ ಲೋಬೊ, ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಅಬ್ದುಲ್ ರಜಾಕ್, ಎನ್‌ಎಸ್‌ಎಸ್ ಅಧಿಕಾರಿಗಳಾದ ರಾಕೇಶ್ ಮತ್ತು ಡಾ.ಸಫಿಯಾ, ಉಪನ್ಯಾಸಕರಾದ ಸೋನಿಯಾ ನೊರೊನ್ಹಾ, ಸ್ಮಿತಾ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿ ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಸ್ವಾಗತಿಸಿದರು. ಲಹರಿ ವಂದಿಸಿದರು.






