ಜಪಾನಿನ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಕುಕ್ಕುಜೆ ಶಾಲೆಯ ಆದಿತ್ಯನ ‘ಕಟ್ ಇಟ್ ಈಸಿ’ ವಿಜ್ಞಾನ ಮಾದರಿ
ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿಶಿಷ್ಟ ಸಾಧನೆ

ಉಡುಪಿ, ಅ.14: ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶದಲ್ಲಿರುವ ಕುಕ್ಕುಜೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಅಪೂರ್ವ ಸಾಧನೆ ಮಾಡಿದೆ.
ಈ ಶಾಲೆಯ ವಿದ್ಯಾರ್ಥಿ ಆದಿತ್ಯ ರೂಪಿಸಿದ ‘ಕಟ್ ಇಟ್ ಈಸಿ’ ಎಂಬ ನೂತನ ಯಂತ್ರವು ಹೊಸದಿಲ್ಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ನಡೆದ ಇನ್ಸ್ಪಾಯರ್ ಅವಾರ್ಡ್ ಮನಾಕ್ ಸ್ಪರ್ಧೆಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ದಾಟಿ ದೇಶದ ಟಾಪ್-60 ಆವಿಷ್ಕಾರಗಳಲ್ಲಿ ಸ್ಥಾನ ಪಡೆಯುವ ಜೊತೆಗೆ ಆದಿತ್ಯ ಜಪಾನ್ನಲ್ಲಿ ನಡೆಯಲಿರುವ ಅಂತಾ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಶಾಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ ಆದಿತ್ಯ ಈ ವಿಜ್ಞಾನ ಮಾದರಿಯನ್ನು ರೂಪಿಸಿದ್ದನು.
ಈ ಸಾಧನೆಯೊಂದಿಗೆ ಕುಕ್ಕುಜೆಯಂತಹ ಅತ್ಯಂತ ಗ್ರಾಮೀಣ ಪ್ರದೇಶದ ಸರಕಾರಿ ಪ್ರೌಢಶಾಲೆ ಎರಡು ಬಾರಿ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿದ್ಯಾರ್ಥಿ ಗಳನ್ನು ಕಳುಹಿಸಿದ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡು ಬಾರಿಯೂ ಸುರೇಶ್ ಮರಕಾಲ ಅವರ ಮಾರ್ಗದರ್ಶನದಲ್ಲಿ ಈ ಸಾದನೆ ಮಾಡಲಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಒಂದೇ ಶಾಲೆಯಿಂದ ಎರಡು ಬಾರಿ ಈ ಸಾಧನೆ ಮಾಡಿದ ದೇಶದ ಮೊದಲ ಶಾಲೆ ಎಂಬ ವಿಶೇಷತೆಯನ್ನೂ ಕುಕ್ಕುಜೆ ಸರಕಾರಿ ಪ್ರೌಢಶಾಲೆ ತನ್ನದಾಗಿಸಿಕೊಂಡಿದೆ! ಈ ಹಿಂದೆ ಇದೇ ಶಾಲೆಯ ವಿದ್ಯಾರ್ಥಿನಿಯರಾದ ಅಮೂಲ್ಯ ಹೆಗ್ಡೆ ಮತ್ತು ನಿಖಿತಾ ಇನ್ಸ್ಪಾಯರ್ ಅವಾರ್ಡ್ ಮೂಲಕ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಜಪಾನ್ನ ಸಕೂರಾ ಸಾಯನ್ಸ್ ಹೈಸ್ಕೂಲ್ ಪ್ರೋಗ್ರಾಮ್ಗೆ ಆಯ್ಕೆಯಾಗಿದ್ದರು.
ಕುಕ್ಕುಜೆ ಶಾಲೆಯ ವಿದ್ಯಾರ್ಥಿಗಳ ಸಾಧನೆಯ ಇನ್ನೊಂದು ವಿಶೇಷವೆಂದರೆ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಈ ಮೂವರು ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಿದವರು ಶಿಕ್ಷಕರಾದ ಸುರೇಶ್ ಮರಕಾಲ. ತರಗತಿಯಲ್ಲಿ ಸಮಾಜ ಪಾಠ ಮಾಡುವ ಸುರೇಶ್ ಅವರು ವಿಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಬೆಳೆಸಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪುವ ಮಾರ್ಗದರ್ಶನ ನೀಡಿದ್ದಾರೆ.
ಈ ಬಾರಿ ಕರ್ನಾಟಕದಿಂದ ರಾಷ್ಟ್ರಮಟ್ಟಕ್ಕೆ ತಲುಪಿದ ಒಟ್ಟು 120 ವಿದ್ಯಾರ್ಥಿಗಳ ಪೈಕಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವವರು ಕೇವಲ 9 ವಿದ್ಯಾರ್ಥಿಗಳು. ಆ ಒಂಬತ್ತು ಪ್ರತಿಭಾವಂತರಲ್ಲಿ ಆದಿತ್ಯ ಕೂಡ ಒಬ್ಬನಾಗಿರು ವುದು ಕುಕ್ಕುಜೆ ಗ್ರಾಮಕ್ಕೆ ಮಾತ್ರವಲ್ಲದೆ ಉಡುಪಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯಕ್ಕೂ ಹೆಮ್ಮೆಯ ಸಂಗತಿಯಾಗಿದೆ!
ಸಂಪನ್ಮೂಲಗಳ ಕೊರತೆ ಅಥವಾ ಗ್ರಾಮೀಣ ಪರಿಸರ ಸಾಧನೆಗೆ ಎಂದಿಗೂ ಅಡ್ಡಿಯಾಗುವುದಿಲ್ಲ; ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ಸರಕಾರಿ ಶಾಲೆಯ ಮಕ್ಕಳೂ ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚಬಲ್ಲರು ಎಂಬುದಕ್ಕೆ ಕುಕ್ಕುಜೆ ಶಾಲೆಯ ಈ ಸಾಧನೆ ಅತ್ಯುತ್ತಮ ನಿದರ್ಶನವಾಗಿದೆ.
ಕುಕ್ಕುಜೆ ಶಾಲೆಯ ವಿದ್ಯಾರ್ಥಿ ಆದಿತ್ಯನ ಸಾಧನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ., ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಶ್ಲಾಘಿಸಿ ಅಭಿನಂದಿಸಿದ್ದಾರೆ.






