ತೆಂಗಿನ ತೋಟಗಳಿಗೆ ತಗುಲಿದ ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕೆ ಸಿಪಿಸಿಆರ್ಐ ಕಾಸರಗೋಡು ವಿಜ್ಞಾನಿಗಳಿಂದ ಕ್ಷೇತ್ರ ಭೇಟಿ

ಕುಂದಾಪುರ, ಅ.14: ಬೈಂದೂರು ತಾಲೂಕಿನ ಹಡವು ಗ್ರಾಮದಲ್ಲಿ ತೆಂಗಿನ ತೋಟಗಳಿಗೆ ಕಪ್ಪು ತಲೆ ಹುಳುವಿನ ಬಾಧೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ತೋಟಗಾರಿಕೆ ಇಲಾಖೆಯ ವತಿಯಿಂದ ಕಾಸರಗೋಡಿನ ಸಿಪಿಸಿಆರ್ಐ ಸಂಸ್ಥೆಯ ವಿಜ್ಞಾನಿಗಳ ತಂಡವು ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿಗಳು ಹಡವು ಗ್ರಾಮದ ವಿವಿಧ ತೆಂಗಿನ ತೋಟಗಳಿಗೆ ಭೇಟಿ ನೀಡಿ, ಕಪ್ಪು ತಲೆ ಹುಳು ವಿನ ಬಾಧೆಯ ತೀವ್ರತೆ, ಹಾನಿಯ ಲಕ್ಷಣಗಳು ಹಾಗೂ ತೆಂಗಿನ ಮರಗಳ ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಿದರು.
ಈ ಕೀಟದ ಬಾಧೆಯಿಂದ ತೆಂಗಿನ ಗರಿಗಳಲ್ಲಿ ಹಸಿರು ಭಾಗವು ಒಣಗು ವುದು, ಗರಿಗಳು ಕಂದು ಬಣ್ಣಕ್ಕೆ ತಿರುಗು ವುದು ಹಾಗೂ ಮರಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಗಳ ಹಾಗೂ ಕೀಟದ ಜೀವನ ಚಕ್ರದ ಕುರಿತು ರೈತರಿಗೆ ಮಾಹಿತಿ ನೀಡಿದರು. ಕಪ್ಪು ತಲೆ ಹುಳುವಿನ ಕೀಟ ಬಾಧೆಯಾದ ತೆಂಗಿನ ತೋಟಗಳಿಗೆ ಜೈವಿಕ ಪರತಂತ್ರಗಳಾದ ಗೊನಿಯೊಜುಸ್ ಹಾಗೂ ಬ್ರಾಕೊನಿಡ್ ಕೀಟಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ರೈತರಿಗೆ ಪ್ರಾಯೋಗಿಕವಾಗಿ ವಿಜ್ಞಾನಿಗಳು ತಿಳಿಸಿದರು.
ಈ ವೇಳೆ ಉಡುಪಿ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಕುಂದಾಪುರ ತಾಲೂಕಿನ ಹಿರಿಯ ಸಹಾಯಕ ನಿರ್ದೇಶಕ ಮನು ಎಂ. ಹಾಗೂ ಸಿಪಿಸಿಆರ್ಐ ವಿಜ್ಞಾನಿಗಳಾದ ಡಾ. ಜೋಸೆಪ್, ಡಾ.ರಾಜಕುಮಾರ್, ಡಾ.ಮನೋಹರನ್ ಉಪಸ್ಥಿತರಿದ್ದರು.






