ಕಾನೂನು ಕೈಗೆ ತೆಗೆದುಕೊಳ್ಳಬೇಡಿ; ಕಬ್ಬು ಬೆಳೆಗಾರರಿಗೆ ಸಿಎಂ ಮನವಿ

ಉಚ್ಚಿಲ : ರಾಜ್ಯದ ಕಬ್ಬು ಬೆಳೆಗಾರರು ದಯವಿಟ್ಟು ತಾಳ್ಮೆಯಿಂದ ಇರಿ ಎಂದು ಮನವಿ ಮಾಡಿಕೊಳ್ಳುತಿದ್ದೇನೆ. ಇದು ರಾಜ್ಯದ ಸಮಸ್ಯೆಯಲ್ಲ, ರಾಷ್ಟ್ರದ ಸಮಸ್ಯೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಭಟನೆಗೆ ಇಳಿದಿರುವ ರಾಜ್ಯ ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉಚ್ಚಿಲದಲ್ಲಿ ನಡೆದಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ- 2026ರಲ್ಲಿ ಇಂದು ಸಂಜೆ ಮಹಿಳಾ ದಸರಾ ವನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಕುರಿತು ಪ್ರಶ್ನಿಸಿದಾಗ, ಈ ವಿಷಯದ ಕುರಿತು ಕೇಂದ್ರದ ಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ಸಭೆ ಕರೆದಿದ್ದಾರೆ. ಆದ್ದರಿಂದ ರೈತರು ದಯವಿಟ್ಟು ತಾಳ್ಮೆಯಿಂದ ಇರುವಂತೆ ಅವರು ಮನವಿ ಮಾಡಿದರು.
ರೈತರು ಉಳಿಯಬೇಕು. ಅದೇ ರೀತಿ ಸಕ್ಕರೆ ಕಾರ್ಖಾನೆಗಳು ಸಹ ಉಳಿಯಬೇಕು. ಇದು ರಾಷ್ಟ್ರದ ಸಮಸ್ಯೆ ಯಾಗಿರುವುದರಿಂದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯದ ಜೊತೆ ಚರ್ಚೆ ಮಾಡುತಿದ್ದೇವೆ. ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಬೆಳೆ ಕೂಡಾ ಕಡಿಮೆಯಾಗಿದೆ ಎಂದವರು ಹೇಳಿದರು.
ದಯವಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಬೆಲೆ ಹಾಗೂ ಕಬ್ಬಿನ ಬೆಲೆ ಎರಡು ಕೂಡಾ ಜಾಸ್ತಿಯಾಗಿಲ್ಲ. ರಾಜ್ಯ ಸರಕಾರದಿಂದ ಸ್ವಲ್ಪ ಸಹಾಯ ಮಾಡಿದ್ದೇವೆ. ಸ್ವಲ್ಪ ತಾಳ್ಮೆಯಿಂದ ಇರಿ. ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿದರು.
ಕರಾವಳಿಗೆ ಆಗಾಗ ಭೇಟಿ ನೀಡುತ್ತಿರುವ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದಾಗ, ಕರಾವಳಿ ಬಹಳ ಪವಿತ್ರ ಭೂಮಿ. ಪ್ರಯತ್ನ ವಿಫಲವಾದರೂ, ಪ್ರಾರ್ಥನೆ ವಿಫಲ ಆಗಲ್ಲ. ಕರಾವಳಿಗೆ ಬಂದರೆ ಪ್ರಾರ್ಥನೆ ಮಾಡಲು ದೊಡ್ಡ ಅವಕಾಶವಿದೆ ಎಂದು ನಗುತ್ತಾ ನುಡಿದರು.
ಜನರ ಸೇವೆ ಮಾಡಲು ದೊಡ್ಡ ಅವಕಾಶ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಅವಕಾಶ. ಜನರ ಸಮಸ್ಯೆ ಬಗೆಹರಿಸಲು ಅವಕಾಶ. ಹಾಗೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕರೆದಿದ್ದಾರೆ.. ಬಂದಿದ್ದೇನೆ ಎಂದರು.






