ಕೇಶವ ಪ್ರಶಸ್ತಿಗೆ ಜಾನಪದ ವಿದ್ವಾಂಸ ಡಾ.ಚಿನ್ನಪ್ಪ ಗೌಡ ಆಯ್ಕೆ

ಉಡುಪಿ : ಮಂಗಳೂರಿನ ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರನ್ನು 2026ನೇ ಸಾಲಿನ ಕೇಶವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25,000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನೊ ಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ತಿಂಗಳು ಉಡುಪಿಯಲ್ಲಿ ನಡೆಯಲಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕೂಡೂರು ಎಂಬಲ್ಲಿ ಜನಿಸಿದ ಕೆ.ಚಿನ್ನಪ್ಪ ಗೌಡರು ಮದರಾಸು ವಿವಿಯಿಂದ ಎಂ.ಎ. ಪದವಿ ಹಾಗೂ ಮಂಗಳೂರು ವಿವಿಯಲ್ಲಿ ಡಾ.ಬಿ.ಎ.ವಿವೇಕ ರೈ ಮಾರ್ಗದರ್ಶನದಲ್ಲಿ ‘ಭೂತಾರಾಧನೆ ಜಾನಪದೀಯ ಅಧ್ಯಯನ’ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.
ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥ ರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಮಂಗಳೂರು ವಿವಿಯಲ್ಲಿ ಕುಲಸಚಿವರಾಗಿ, ಕಲಾ ನಿಕಾಯದ ಡೀನ್ ಆಗಿ, ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ ಬಳಿಕ ಹಾವೇರಿಯ ಕರ್ನಾಟಕ ಜಾನಪದ ವಿವಿಯ ಉಪ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.
ಡಾ.ಗೌಡ ಅವರು ಕನ್ನಡ ಸಾಹಿತ್ಯ, ತುಳುವ ಮೌಖಿಕ ಕಥನ ಮತ್ತು ಸಂಸ್ಕೃತಿ ಹಾಗೂ ಜಾನಪದ ಅಧ್ಯಯನದ ಕುರಿತಂತೆ ವಿಶೇಷ ಪರಿಣತಿ ಹೊಂದಿದ್ದಾರೆ. ಇವರು ಫಿನ್ಲೆಂಡಿನ ಪೋಸ್ಟ್ಡಾಕ್ಟರಲ್ ಫೆಲೋಶಿಪ್, ಜಪಾನಿನ-ಜಪಾನ್ ಫೌಂಡೇಶನ್ ಫೆಲೊಶಿಪ್ ಪಡೆದಿದ್ದಾರೆ. ತುರ್ಕಿ ವಿವಿ, ಫಿನ್ಲೆಂಡ್ ತ್ಯುಂಬಿಗನ್, ಜರ್ಮನಿಯ ವೂರ್ಝ್ ಬರ್ಗ್ನ ಮ್ಯಾಕ್ಸ್ಮಿಲ್ಲನ್ಸ್ ವಿವಿ ಮುಂತಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಭೂತಾರಾಧನೆ- ಮಾಯದ ನಡೆಜೋಗದ ನುಡಿ, ಸಿರಿಸಂಧಿ: ಕನ್ನಡ ಪ್ರಸ್ತಾವನೆ ತುಳು ಪಠ್ಯ, ಆಧುನಿಕ ತುಳು ಕಾವ್ಯ, ಆಧುನಿಕ ತುಳು ಕತೆಗಳು, ತುಳುವಿನ ಜನಪದ/ಅಜ್ಜಿ ಕತೆಗಳು, ಮಿತ್ತಬೈಲ್ ಯಮುನಕ್ಕ ಇವರ ಪ್ರಮುಖ ಕೃತಿಗಳಾಗಿದ್ದು, ಇದರೊಂದಿಗೆ ಅನೇಕ ಕನ್ನಡ-ತುಳು ಕವನ ಸಂಕಲನ, ಕಾದಂಬರಿಗಳನ್ನು ರಚಿಸಿದ್ದಾರೆ.
ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಂದೇಶ, ಕಾರಂತ, ಕುಶಿ, ಬನ್ನಂಜೆ, ಜೀಶಂಪ, ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ, ಏರ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ.






