ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಯುವಜನ, ವಯೋಜನ ಆಯೋಗ ಸ್ಥಾಪನೆಗೆ ಸರಕಾರಕ್ಕೆ ಸಲಹೆ: ಶಾಹಿದ್ ತೆಕ್ಕಿಲ್

ಉಡುಪಿ, ಅ.16: ಯುವಜನತೆ ಮತ್ತು ಹಿರಿಯನಾಗರಿಕರ ಸಮಸ್ಯೆಗಳಿಗೆ ಪರಿಹಾರ ಹಾಗೂ ಹಕ್ಕುಗಳ ರಕ್ಷಣೆಗಾಗಿ ಕೇರಳ ರಾಜ್ಯ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಯುವಜನ ಆಯೋಗ ಮತ್ತು ವಯೋಜನ ಆಯೋಗವನ್ನು ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಲಹೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಹೇಳಿದ್ದಾರೆ.
ಉಡುಪಿ ರಜತಾದ್ರಿಯಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರದ ಹಲವಾರು ನೀತಿಯಿಂದಾಗಿ ಇಂದು ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಮಿಕರ ಮೇಲಿನ ಕಾಳಜಿ ಯಲ್ಲಿ 9 ವರ್ಷಗಳ ಬಳಿಕ ಕನಿಷ್ಠ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಆದರೆ ಈ ಆದೇಶದ ವಿರುದ್ಧ ಮಾಲಕರು ನ್ಯಾಯಾಲಯದ ಮೋರೆಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಸರಕಾರದ ಮಟ್ಟದಲ್ಲೂ ಚರ್ಚೆಗಳು ನಡೆಯುತ್ತಿವೆ ಮತ್ತು ಸಚಿವ ಸಂಪುಟ ಉಪ ಸಮಿತಿಯನ್ನು ಕೂಡ ರಚಿಸಲಾ ಗಿದೆ. ಶೀಘ್ರವೇ ಈ ಪ್ರಕರಣ ಕೋರ್ಟ್ನಲ್ಲಿ ಇತ್ಯರ್ಥ ಆಗಿ ಸರಕಾರದ ಪರ ತೀರ್ಪು ಬರುವ ವಿಶ್ವಾಸ ಇದೆ ಎಂದರು.
ರಾಜ್ಯ 3.5ಕೋಟಿ ವಿವಿಧ ವಲಯಗಳ ಕಾರ್ಮಿಕರು ಇದ್ದಾರೆ. ರಾಜ್ಯ ಸರಕಾರ ಯಾವತ್ತೂ ಕಾರ್ಮಿಕರ ಪರವಾ ಗಿರುತ್ತದೆ. ಅವರಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಲು ಬಿಡುವುದಿಲ್ಲ. ಕೆಲವು ಕಡೆ ಮಾಲಕರು ಕಾರ್ಮಿಕ ರನ್ನು ದುಡಿಸಿ ಸಂಬಳ ನೀಡುತ್ತಿಲ್ಲ. ಈ ಸಂಬಂಧ ಸರಕಾರ ಮತ್ತು ಅಧಿಕಾರಿಗಳು ನಿಗಾ ವಹಿಸುತ್ತಿದ್ದು, ಕಾರ್ಮಿಕರ ದುಡಿಮೆಗೆ ತಕ್ಕ ಪ್ರತಿಫಲ ಸಿಗುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಮಿಕರ ಸಮಸ್ಯೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸುವಂತೆ ಮತ್ತು ಅವರಿಗೆ ಸಿಗುವ ಸರಕಾರಿ ಸೌಲಭ್ಯಗಳು ಮತ್ತು ಅವರ ಹಕ್ಕುಗಳ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಕೇಂದ್ರ ಸರಕಾರದ ನಾಲ್ಕು ಕಾರ್ಮಿಕ ಸಂಹಿತೆ ರಾಜ್ಯದಲ್ಲಿ ಈವರೆಗೆ ಅನುಷ್ಛಾನ ಆಗಿಲ್ಲ. ಸದ್ಯ ಅದು ಚರ್ಚಾ ಹಂತದಲ್ಲಿದೆ ಎಂದರು.
ಹೊರ ಗುತ್ತಿಗೆ ಆಧಾರಿತ ನೌಕರರ ವೇತನದಲ್ಲಿ ಜಿಎಸ್ಟಿ ಕಡಿತ ಮಾಡುವುದನ್ನು ಕೈಬಿಡುವಂತೆ ಹಾಗೂ ಪತ್ರಕರ್ತರನ್ನು ಕಾರ್ಮಿರ ಇಲಾಖೆಯಡಿ ತಂದು ಕನಿಷ್ಠ ವೇತನ ನಿಗದಿ ಪಡಿಸುವ ಕುರಿತು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹ್ಮದ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಹಲವು ತಾಲೂಕುಗಳ ಬರಗಾಲ ಪೀಡಿತವಾಗಿದೆ. ಕೇಂದ್ರ ಸರಕಾರ ಇದಕ್ಕೆ ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ ಎಂದು ಟಿ.ಎಂ. ಶಾಹಿದ್ ತೆಕ್ಕಿಲ್ ದೂರಿದರು.
ಜಿಎಸ್ಟಿಯ ರಾಜ್ಯದ ಪಾಲು ಇನ್ನೂ ಕೊಟ್ಟಿಲ್ಲ. ಯಾವುದೇ ಹೊಸ ಯೋಜನೆ ರಾಜ್ಯಕ್ಕೆ ನೀಡಿಲ್ಲ. ನೆಹರು, ಇಂದಿರಾ ಕಾಲದಲ್ಲಿ ಮಾಡಿದ ಯೋಜನೆಗಳನ್ನು ಈಗ ಮಾರಾಟ ಮಾಡಲು ಮುಂದಾಗುತ್ತಿದೆ. ರಾಜ್ಯದ ಬಿಜೆಪಿ ನಾಯಕರು ಈ ಬಗ್ಗೆ ಪ್ರಧಾನಿ ಜೊತೆ ಮಾತುಕತೆ ನಡೆಸಿ ಪರಿಹಾರ ಒದಗಿಸುತ್ತಿಲ್ಲ ಎಂದು ಅವರು ಆರೋಪಿಸಿದರು.






