‘ಯುವ ಸಂಸತ್ತಿನಿಂದ ಯುವಕರಿಗೆ ಸಂವಿಧಾನ, ಸಂಸತ್ತಿನ ಪರಿಚಯ’

ಉಡುಪಿ : ಯುವಕರಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶದ ಸಂವಿಧಾನ ಹಾಗೂ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಪರಿಚಯಿಸಲು ಯುವ ಸಂಸತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಹಾಗೂ ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡುವ ಯುವ ಸಂಸತ್ನಂತಹ ಕಾರ್ಯಕ್ರಮಗಳ ಆಯೋಜನೆ ಅರ್ಥಪೂರ್ಣ ಎಂದು ಶಾಸಕ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ, ಕಾನೂನು ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ನಡೆದ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2047ರ ವೇಳೆಗೆ ದೇಶವು ಸಂಪೂರ್ಣ ಅಭಿವೃದ್ದಿ ಹೊಂದಿದ ವಿಕಸಿತ ಭಾರತವಾಗಬೇಕು ಎನ್ನುವುದು ನಮ್ಮೆಲ್ಲರ ಲಕ್ಷ್ಯ. ಈ ಲಕ್ಷ್ಯಪೂರ್ತಿಗಾಗಿ ಯುವಕರು ಸನ್ನದ್ದರಾಗಬೇಕು. ಭಾರತವು ಯುವ ದೇಶವಾಗಿದ್ದು, ಯುವಕರು ಸಂವಿಧಾನ ಹಾಗೂ ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಸರಿಯಾದ ಜ್ಞಾನ ಹೊಂದಿದಾಗ ದೇಶವನ್ನು ಅಭಿವೃದ್ದಿ ಪಥದಲ್ಲಿ ಮುನ್ನಡೆಸಬಹುದು ಎಂದವರು ಹೇಳಿದರು.
ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಇಂದಿನ ಸಮಾಜಕ್ಕೆ ಬಹು ಅಗತ್ಯವಾಗಿರುವ ಕಾರ್ಯಕ್ರಮ ಇದಾಗಿದ್ದು ವಿದ್ಯಾರ್ಥಿ ಜೀವನದಲ್ಲೇ ಕೇಂದ್ರ ಸಂಸತ್ತಿನ ಹಾಗೂ ರಾಜ್ಯದ ಎರಡೂ ಸದನಗಳ ಕಾರ್ಯಕಲಾಪಗಳ ಪರಿಚಯವಾಗಲಿದೆ. ಅತ್ಯಂತ ವಿಸ್ತೃತ ಸಂವಿಧಾನ ಹೊಂದಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ನಮ್ಮ ನಡವಳಿಕೆ ಮತ್ತು ಆಚರಣೆಗಳು ಸಂವಿಧಾನಬದ್ದವಾಗಿರಬೇಕು. ಮುಖ್ಯವಾಗಿ ಜೆನ್-ಝೀ ಹಾಗೂ ಜೆನ್-ಆಲ್ಫಾಗಳು ಸಂವಿಧಾನದ ಮತ್ತು ಸಂಸತ್ತಿನ ಬಗ್ಗೆ ಅರಿವು ಹೊಂದಲು ಯುವ ಸಂಸತ್ ಕಾರ್ಯಕ್ರಮ ಸಹಕಾರಿ ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಪಂಚಾಯತ್ನಿಂದ ಪಾರ್ಲಿಮೆಂಟ್ವರೆಗೆ ಜನರು ನಮ್ಮನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿ ಕಳುಹಿಸುತ್ತಾರೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಸಂಸತ್ತೇ ಇರಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಒಟ್ಟಾಗಿ ಕೆಲಸ ಮಾಡಬೇಕು. ತಮ್ಮನ್ನು ಆರಿಸಿ ಕಳುಹಿಸಿದ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ ಜನತೆಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಯುವ ಸಂಸತ್ ಒಂದು ಮಾದರಿ ಕಾರ್ಯಕ್ರಮ ಎಂದರು.
ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶುಪಾಲೆ ಸುರೇಖಾ ಕೆ. ಮಾತನಾಡಿ ಯುವ ಸಂಸತ್ತು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಕೆಲವರಾದರೂ ಇಂದು ತಾವು ನಿಭಾಯಿಸಿದ ಸಚಿವ ಸ್ಥಾನವನ್ನು ಮುಂದೊಂದು ದಿನ ನಿಜ ಜೀವನದಲ್ಲೂ ನಿಭಾಯಿಸಬಹುದು. ಆಗ ಇಲ್ಲಿ ಪಡೆದ ಅನುಭವಗಳು ಸಹಾಯಕ್ಕೆ ಬರುವುದು. ಕಾಲೇಜಿನಲ್ಲಿ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳುಎಂದು ನುಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಿಜಯಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರವೀಣ್ ಕುಮಾರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ತೀರ್ಪುಗಾರರಾಗಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಅದಿತಿ ಭಟ್, ನಿವೃತ್ತ ಉಪನ್ಯಾಸಕ ಸುರೇಂದ್ರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಸ್ವಾಗತಿಸಿ, ಸಿಬ್ಬಂದಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಅಧೀಕ್ಷಕಿ ಜಯಲಕ್ಷ್ಮಿ ವಂದಿಸಿದರು.






