ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ : ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.16: ಸರಕಾರ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿ ಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ ಕಾರ್ಮಿಕರಿಗೆ ತಲುಪಿಸು ವುದರೊಂದಿಗೆ ಅವರು ಯಾವುದೇ ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತ ರಾಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಹೇಳಿದ್ದಾರೆ.
ಶುಕ್ರವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಕಾರ್ಮಿಕ ಅಧಿಕಾರಿಗಳು ಹಾಗೂ ಜಿಲ್ಲೆಯ ಕಾರ್ಮಿಕ ಮುಖಂಡರುಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು.
ರಾಜ್ಯದಲ್ಲಿ ಸುಮಾರು 3.5 ಕೋಟಿ ವಿವಿಧ ವಲಯಗಳ ಕಾರ್ಮಿಕ ರಿದ್ದಾರೆ. ಸರಕಾರವು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಯಾವುದೇ ಕೆಲಸವನ್ನು ಯಾವುದೇ ಮುಲಾಜಿಲ್ಲದೇ ಮಾಡಬೇಕು. ಕಾರ್ಮಿಕರು ರಾಜ್ಯದ ಯಾವುದೇ ಮೂಲೆ ಯವರಾಗಿರಲಿ, ಅವರು ಮಾಡಿದ ಕೆಲಸಕ್ಕೆ ಕನಿಷ್ಠ ಕೂಲಿ ಸಿಗುತ್ತಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಅಧಿಕಾರಿಗಳ ಜವಾಬ್ದಾರಿ ಯಾಗಿದ್ದು, ಇದನ್ನು ಮಾನವೀಯತೆ ದೃಷ್ಟಿಯಿಂದ ಮಾಡಬೇಕು ಎಂದರು.
ರಾಜ್ಯದಲ್ಲಿ ಪ್ರಸ್ತುತ ಜೀವನಶೈಲಿ ಬದಲಾವಣೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮನಗಂಡ ಸರಕಾರವು 9 ವರ್ಷಗಳ ನಂತರ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆಗೆ ಕ್ರಮ ಕೈಗೊಂಡಿದ್ದು, ವಿವಿಧ ಹಂತದಲ್ಲಿ ಕನಿಷ್ಠ ವೇತನ ನಿಗದಿಪಡಿಸುವ ಪ್ರಕ್ರಿಯೆ ನಡೆದಿದೆ. ಆದರೆ ಕೆಲವರು ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಸರಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲಿ ಈ ಬಗ್ಗೆ ಸೂಕ್ತ ನಿರ್ಣಯ ಹೊರಬೀಳಲಿದೆ ಎಂದರು.
ಕಾರ್ಮಿಕ ಸಂಘಟನೆಗಳು ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸ ಬೇಕು. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಸರಕಾರದಿಂದ ದೊರಕುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಅಸಂಘಟಿತ ಕಾರ್ಮಿಕರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದುಡಿಯುವ ವರ್ಗದ ಕಾರ್ಮಿಕರ ಹಿತವನ್ನು ಕಾಪಾಡುವುದರೊಂದಿಗೆ ಅವರು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕು ಎಂದ ಅವರು, ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ದೊರೆಯುವುದರೊಂದಿಗೆ ಸಾಮಾಜಿಕ ಭದ್ರತೆಯ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.
ಕಾರ್ಮಿಕರ ಕಲ್ಯಾಣವಾದಾಗ ಸಮಾಜದ ಕಲ್ಯಾಣ ಆಗುತ್ತದೆ. ಕಟ್ಟಡ ಕಾರ್ಮಿಕರು ವರ್ಷದಲ್ಲಿ 90 ದಿನಗಳ ಕಾಲ ಕೆಲಸ ನಿರ್ವಹಿಸಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿದಾಗ ಬೇರೆ ಸೌಲಭ್ಯಕ್ಕಾಗಿ ನೋಂದಣಿಯನ್ನು ರದ್ದುಗೊಳಿಸಬಾರದು ಎಂದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್, ಉಡುಪಿ ಕಾರ್ಮಿಕ ನಿರೀಕ್ಷಕರಾದ ಸಂಜಯ್ ಹಾಗೂ ಮಲ್ಲಿಕ್ ಪ್ರಸಾದ್, ಉಡುಪಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ, ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.






