ಉಳ್ತೂರು | ಎಫ್ಎಸ್ಟಿಪಿ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಕುಂದಾಪುರ: ಉಡುಪಿ ಜಿಲ್ಲೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಲತ್ಯಾಜ್ಯ ನಿರ್ವಹಣಾ ಘಟಕವನ್ನು (ಎಫ್ಎಸ್ಟಿಪಿ) ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳ್ತೂರಿನ (ಸರ್ವೇ ನಂ. 219/2) ನಿರ್ಮಿಸಲು ಉದ್ದೇಶಿಸಿ ನಡೆಯುತ್ತಿರುವ ಕಾಮಗಾರಿಗೆ ಶುಕ್ರವಾರ ಕರ್ನಾಟಕ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿ, ಇದರ ಮುಂದಿನ ವಿಚಾರಣೆಯನ್ನು ನ.6ಕ್ಕೆ ನಿಗದಿಪಡಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.
ಉಳ್ತೂರು ಭಾಗದ ಮೂರು ಗ್ರಾಮಪಂಚಾಯತ್ಗೊಳಪಟ್ಟ ಸಾರ್ವಜನಿಕರು ಸಹಿತ ಸ್ಥಳೀಯರ ಪ್ರಬಲ ಆಕ್ಷೆಪಣೆಗಳು, ವಿರೋಧ, ಹೋರಾಟದ ನಡುವೆಯೂ ಕೆಲ ದಿನಗಳಿಂದ ಕಾಮಗಾರಿಗೆ ಸಂಬಂಧಿತ ಇಲಾಖೆ ಮುಂದಾಗಿತ್ತು. ಶುಕ್ರವಾರವೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಕಾಮಗಾರಿ ನಡೆಸುತ್ತಿದ್ದ ವೇಳೆ ಹೈಕೋರ್ಟ್ ನೀಡಿದ ಆದೇಶದಿಂದ ಕಾಮಗಾರಿ ನಿಲ್ಲಿಸಲಾಗಿದೆ.
ಯಾವುದೋ ಭಾಗದಿಂದ ಜನವಸತಿ ಪ್ರದೇಶವಿರುವ ಉಳ್ತೂರಿಗೆ ಮಲತ್ಯಾಜ್ಯ ತರುವ ಬಗ್ಗೆ, ಜನವಸತಿ ಪ್ರದೇಶದಲ್ಲಿ ಘಟಕ ನಿರ್ಮಿಸುವ ಬಗ್ಗೆ ಕೆದೂರು, ಉಳ್ತೂರು, ಬೇಳೂರು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಕಾಮಗಾರಿ ನಡೆಸದಂತೆ ಒತ್ತಾಯಿಸಿ ವರ್ಷಗಳಿಂದ ಪ್ರತಿಭಟನೆ ನಡೆಸಿದ್ದು ಕಾಲ್ನಡಿಗೆ ಜಾಥಾ, ಸ್ವಯಂಪ್ರೇರಿತ ಬಂದ್ ಕೂಡ ನಡೆದಿತ್ತು. ಈ ನಡುವೆಯೂ ಕಾಮಗಾರಿ ಮಾಡುವ ಹಿನ್ನೆಲೆ ಸ್ಥಳೀಯರು ನಿತ್ಯವೂ ವಿರೋಧಿಸಿ ಪ್ರತಿಭಟಿಸಿದ್ದು ಸಮಾನ ಮನಸ್ಕರು ಹೋರಾಟ ಸಮಿತಿ ರಚಿಸಿ ಕಾನೂನು ಮೊರೆ ಹೋಗಿದ್ದರು.
ಸ್ಥಳೀಯರಾದ ಪ್ರಶಾಂತ್ ಶೆಟ್ಟಿ ಉಳ್ತೂರು, ಅಜಿತ್ ಶೆಟ್ಟಿ ಹಾಗೂ ನ್ಯಾಯವಾದಿ ಅವಿನಾಶ್ ಶೆಟ್ಟಿ ಬೇಳೂರು, ಮಲತ್ಯಾಜ್ಯ ಘಟಕದ ಕಾಮಗಾರಿಯನ್ನು ತಡೆಹಿಡಿಯುವಂತೆ ಪೂರಕ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆ ಗಳಿಂದ ಪಡೆದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲ ಪವನಚಂದ್ರ ಶೆಟ್ಟಿ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಸಹಿತ ಹಲವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಕಾಮಗಾರಿ ಮುಂದುವರಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.






