ತುಳುವಿಗೆ ಮಾನ್ಯತೆ ಸಿಕ್ಕಿರುವುದು ಭಾಷೆ, ಸಂಸ್ಕೃತಿಗೆ ದೊರೆತ ಗೌರವ: ಎಡಿಸಿ ಅಬಿದ್ ಗದ್ಯಾಳ್

ಮಣಿಪಾಲ, ಅ.17: ತುಳುವಿಗೆ ಮಾನ್ಯತೆ ಸಿಕ್ಕಿರುವುದು ಒಂದು ಭಾಷೆಗೆ ಮಾತ್ರವಲ್ಲ, ಸಂಸ್ಕೃತಿಗೆ ಸಿಕ್ಕಿದ ಗೌರವವಾಗಿದೆ. ಸರಕಾರದ ಮಹತ್ವದ ಈ ನಿರ್ಧಾರದಿಂದಾಗಿ ತುಳು ಭಾಷೆಯನ್ನು ಉಳಿಸಿ ಬೆಳೆಸುವ ಕುರಿತು ರಚನಾತ್ಮಕ ಹೆಜ್ಜೆ ಇರಿಸಲು ಸಾಧ್ಯವಾಗಿದೆ. ತುಳುವನ್ನು ಪಸರಿಸುವ ನಿಟ್ಟಿನಲ್ಲಿ ತುಳು ಸಂಭಾಷಣೆಯನ್ನು ಕಲಿಸುವ ಪ್ರಯತ್ನ ಮುಖ್ಯವಾದುದಾಗಿದೆ ಎಂದು ಉಡುಪಿ ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಹೇಳಿದ್ದಾರೆ.
ಮಣಿಪಾಲ ಮಾಹೆಯ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಸರ್ವೋದಯ ಹಾಲ್ನಲ್ಲಿ ಅ.16ರಂದು ತುಳು ಸಂಭಾಷಣ ತರಗತಿಯ ಸಮಾರೋಪ ಸಮಾರಂಭದಲ್ಲಿ ತುಳುವಿಗೆ ಕರ್ನಾಟಕ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ಲಭಿಸಿರುವ ಬಗ್ಗೆ ಹಮ್ಮಿಕೊಳ್ಳಲಾದ ಸಂವಾದದಲ್ಲಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಉಡುಪಿಯ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಭಾಷೆಗೆ ಸಿಕ್ಕಿರುವ ಮಾನ್ಯತೆಯಿಂದಾಗಿ ಶೆಕ್ಷಣಿಕ ಕ್ಷೇತ್ರದಲ್ಲಿ ತುಳು ಭಾಷೆಯನ್ನು ಬೆಳೆಸಲು ಅನುಕೂಲ ವಾತಾವರಣ ಕಲ್ಪಿಸಿದಂತಾಗಿದೆ’ ಎಂದರು.
ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ಬಾಸೆಲ್ ಮಿಶನ್ನ ಕಾಲದಿಂದ ಇಂದಿನ ವರೆಗೆ ತುಳು ಭಾಷೆ ಮತ್ತು ಸಾಹಿತ್ಯವನ್ನು ಉಳಿಸುವ ಪ್ರಯತ್ನದ ಫಲವಾಗಿ ರಾಜ್ಯ ಸರಕಾರದ ಮಾನ್ಯತೆ ಸಿಕ್ಕಿದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸಾಯನ್ಸಸ್, ಹ್ಯುಮಾನಿಟೀಸ್ ಆ್ಯಂಡ್ ಆರ್ಟ್ಸ್ನ ನಿರ್ದೇಶಕಿ ಪ್ರೊ. ಗಾಯತ್ರಿ ಪ್ರಭು ಮಾತನಾಡಿ, ಶೆಕ್ಷಣಿಕ ವಲಯದಲ್ಲಿ ಸ್ಥಳೀಯ ಭಾಷೆ, ಸ್ಥಳೀಯ ಜ್ಞಾನ ಮತ್ತು ಸ್ಥಳೀಯ ಸಂಸ್ಕೃತಿಗಳಿಗೆ ಆದ್ಯತೆ ದೊರಕುತ್ತಿರುವ ಪ್ರಸ್ತುತ ಕಾಲದಲ್ಲಿ ಮಿಶವು ತುಳು ಭಾಷೆಯ ಅಧ್ಯಯ ನಕ್ಕೆ ವಿಶೇಷ ಮಹತ್ತ್ವ ನೀಡುತ್ತದೆ’ ಎಂದರು.
ಪ್ರಾಧ್ಯಾಪಕಿ ಡಾ.ನಿಕೇತನಾ, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡಕ, ಸಿಕೆಆರ್ಎನ ಸಂಯೋಜಕ ಪೃಥ್ವಿರಾಜ ಕವತ್ತಾರು ಉಪಸ್ಥಿತರಿದ್ದರು. ತುಳು ತರಗತಿಯ ವಿದ್ಯಾರ್ಥಿಗಳಾದ ಭಾಗ್ಯಜ್ಯೋತಿ, ಸೆಮನ್ ಥಾಮಸ್, ಅಭ್ಯುದಯ್ ಮತ್ತು ಮಾನಸಾ ಎಸ್. ತುಳು ನಾಟಕವನ್ನು ಪ್ರಸ್ತುತ ಪಡಿಸಿದರು.
ಲೆ.ಕರ್ನಲ್ ರಾಘವೇಂದ್ರ ಎಂ.ಕೆ., ಡಾ.ಆನಂದ್ ವಿ., ಶ್ರೀರಕ್ಷಾ ಭಂಡಾರ್ಕಾರ್, ಸುಮಿತ್ ಕುಮಾರ್ ಮೊದಲಾದ ವರು ತುಳು ತರಗತಿಯ ಅನುಭವವನ್ನು ಹಂಚಿಕೊಂಡರು. ಅಶ್ನಾ ಶೆಟ್ಟಿ ಸ್ವಾಗತಿಸಿದರು. ಡಾ.ಮಾತಂಗಿ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು.






