ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ: ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ

ಮಣಿಪಾಲ, ಅ.17: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಮಹಿಳಾ ಸಮಾಜ, ಇನ್ನರ್ ವೀಲ್ ಮಣಿಪಾಲ ಮತ್ತು ಪವರ್ ಗ್ರೂಪ್ ಮಣಿಪಾಲದ ಸಹಯೋಗದೊಂದಿಗೆ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಶುಕ್ರವಾರ ಸಂಜೆ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕಟ್ಟಡವನ್ನು ಗುಲಾಬಿ ಬಣ್ಣದ ದೀಪಗಳಿಂದ ಬೆಳಗಿಸಲಾಯಿತು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಆಗಿದೆ. ಆದರೂ ಭಯ, ಹಿಂಜರಿಕೆ ಅಥವಾ ಜಾಗೃತಿಯ ಕೊರತೆಯಿಂದಾಗಿ ಅನೇಕರು ತಡವಾದ ಹಂತದಲ್ಲಿ ನಮ್ಮ ಬಳಿ ಬರುತ್ತಾರೆ. ಈ ಗುಲಾಬಿ ದೀಪಾಲಂಕಾರವು ನಮ್ಮ ಸಮುದಾಯದ ಪ್ರತಿಯೊಬ್ಬ ಮಹಿಳೆಗೂ ಒಂದು ಸಂದೇಶ: ನಿಮ್ಮ ದೇಹದ ಮಾತನ್ನು ಆಲಿಸಿ, ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ಮತ್ತು ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸಿ ಎಂದರು.
ಕಸ್ತೂರ್ಬಾ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ.ಅನಂತ್ ಪೈ ಮಾತನಾಡಿ, ಸ್ತನ ಕ್ಯಾನ್ಸರ್ ಕೇವಲ ಮಹಿಳೆಯ ಮೇಲಷ್ಟೇ ಅಲ್ಲ, ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಚಿಕಿತ್ಸೆ ಹೆಚ್ಚು ಪರಿಣಾಮ ಕಾರಿಯಾಗುತ್ತದೆ ಮತ್ತು ಉತ್ತಮ ಫಲಿತಾಂಶ ಸಿಗುತ್ತದೆ. 40 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಸ್ತನ ಸ್ವಯಂ ಪರೀಕ್ಷೆಯನ್ನು ನಿಯಮಿತ ಅಭ್ಯಾಸವನ್ನಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ನೇತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸುಲತಾ ಭಂಡಾರಿ, ಪ್ಯಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಮುಖ್ಯಸ್ಥೆ ಡಾ.ಅನುಜಾ, ಮಣಿಪಾಲ ಮಹಿಳಾ ಸಮಾಜದ ಉಪಾಧ್ಯಕ್ಷೆ ಹಾಗೂ ಇನ್ನರ್ ವೀಲ್ ಜಿಲ್ಲಾ ಖಜಾಂಚಿ ದೀಪಾ ಭಂಡಾರಿ ಮತ್ತು ಪವರ್ ಗ್ರೂಪ್ ಕಾರ್ಯದರ್ಶಿ ಸುಜಯಾ ಶೆಟ್ಟಿ ಉಪಸ್ಥಿತರಿದ್ದರು. ಸಾರ್ವಜನಿಕರ ಜಾಗೃತಿಯ ಸಂಕೇತವಾಗಿ, ಕಟ್ಟಡವು ಅ.18ರವರೆಗೆ ಗುಲಾಬಿ ಬಣ್ಣದಲ್ಲಿ ಕಂಗೊಳಿಸಲಿದೆ.






