ಹವಮಾನ ವೈಪರೀತ್ಯದಿಂದಾಗಿ ನಿರಂತರ ಕೃಷಿ ಸಂಶೋಧನೆಗಳು ಅಗತ್ಯ: ಡಾ.ಎಂ.ವಿ.ಧನಂಜಯ
ಬ್ರಹ್ಮಾವರದಲ್ಲಿ ಎರಡು ದಿನಗಳ ಕೃಷಿ-ತೋಟಗಾರಿಕಾ ಮೇಳ ಉದ್ಘಾಟನೆ

ಉಡುಪಿ, ಅ.17: ಕೃಷಿಗೆ ಸಂಬಂಧಿಸಿ ಸಾಕಷ್ಟು ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿದರೂ ಈಗಿನ ಹವಮಾನ ವೈಫರೀತ್ಯದಿಂದಾಗಿ ಇವು ಯಾವುದು ಕೂಡ ಸದ್ಯದ ಸಂದರ್ಭಕ್ಕೆ ಉಪಯೋಗ ಆಗುತ್ತಿಲ್ಲ. ಹಾಗಾಗಿ ಈ ವಿಚಾರದಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಸಬೇಕಾದ ಅವಶ್ಯಕತೆ ಇದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ವಿ. ಧನಂಜಯ ಹೇಳಿದ್ದಾರೆ.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಡಿಪ್ಲೋಮಾ ಮಹಾ ವಿದ್ಯಾಲಯದದ ಸಂಯುಕ್ತ ಆಶ್ರಯದಲ್ಲಿ ಕೇಂದ್ರದ ಆವರಣದಲ್ಲಿ ಶನಿವಾರ ನಡೆದ ಎರಡು ದಿನಗಳ ಕೃಷಿ ಮತ್ತು ತೋಟಗಾರಿಕಾ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಹವಮಾನ ವೈಪರೀತ್ಯದಿಂದ ರೈತರಿಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿದ್ದು, ಈ ನಿಟ್ಟಿನಲ್ಲಿ ಹವಮಾನ ಗುಣಗಳನ್ನು ನೋಡಿಕೊಂಡು ರೈತರಿಗೆ ಸೂಕ್ತ ಸಲಹೆ ನೀಡಲು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ವಿಶೇಷ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.
ತಂತ್ರಜ್ಞಾನ ಎಷ್ಟೇ ಬೆಳೆದರೂ ಅದು ರೈತರಿಗೆ ವ್ಯವಸ್ಥಿತವಾಗಿ ತಲುಪದೆ ಇದ್ದರೆ ಅದು ಸಾರ್ಥಕತೆ ಆಗುವುದಿಲ್ಲ. ಪೋಷಾಂಕಶ ನಿರ್ವಹಣೆ ಬಗ್ಗೆ ಸಾಕಷ್ಟು ಸಂಶೋಧನೆಗಳಾದರೂ ರೈತರು ಮಾತ್ರ ಅದನ್ನು ಅಳವಡಿಸಿಕೊಳ್ಳುತ್ತಿಲ್ಲ. ರೈತ ಸಂಪರ್ಕ ಕೇಂದ್ರ ಹೋಬಳಿ ಮಟ್ಟಕ್ಕೆ ಬಂದರೂ ವಿಜ್ಞಾನಿಗಳು ಸಂಶೋಧಿಸಿರುವ ತಂತ್ರಜ್ಞಾನಗಳು ರೈತರಿಗೆ ಇನ್ನೂ ತಲುಪುತ್ತಿಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಿಎಂಜಿಎಸ್ವೈ ಯೋಜನೆ ಯಡಿ ಆಹಾರ ಉತ್ಪನ್ನ ಘಟಕ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಶೇ.40ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದರಲ್ಲಿ ಉಡುಪಿ ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರಕಾರದಿಂದ ಕೃಷಿಗೆ ಶಕ್ತಿ ಕೊಡುವ ಕೆಲಸ ನಡೆಯುತ್ತಿದೆ ಎಂದರು.
ಭತ್ತಕ್ಕೆ ಕೇಂದ್ರ ಸರಕಾರ ಪ್ರಸ್ತುತ 2350-2400ರೂ. ಬೆಂಬಲ ಬೆಲೆ ನೀಡಿದರೂ ಮತ್ತೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಪ್ರಯತ್ನಿಸ ಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಹಲವಾರು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಅವಶ್ಯಕತೆ ಹಾಗೂ ಅನಿವಾರ್ಯತೆ ಕೂಡ ಇದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು, ಜನಪ್ರತಿನಿಧಿಗಳು, ಸರಕಾರ ಒಟ್ಟಾರೆಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಪೂರ್ ಮಾತನಾಡಿ, ವಿದ್ಯಾರ್ಥಿ ಸಮುದಾಯ ಸಂಶೋದನೆ ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕು. ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂಶೋಧನೆ ಮಾಡಲು ಇದೊಂದು ಸಂಶೋಧನಾ ಕೇಂದ್ರವಾಗಿ ಮತ್ತಷ್ಟು ಮೇಲ್ದರ್ಜೆಗೆ ಏರಬೇಕು. ವಾರಾಹಿ ಯೋಜನೆಯ ನೀರಾವರಿ ಸೌಲಭ್ಯಗಳು ಇಲ್ಲಿನ ಬೆಳೆಗಳಿಗೆ ದೊರಕುವಂತಾಗಬೇಕು. ರೈತರಿಗೆ ಪೂರಕವಾದ ಎಲ್ಲಾ ರೀತಿಯ ಬೆಂಬಲವನ್ನು ಅವರುಗಳಿಗೆ ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.
ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎಚ್.ಡಿ. ದೇವಿಕುಮಾರ್, ಎಚ್.ಎಸ್.ಶಶಾಂಕ್, ಡಾ.ವೀರಣ್ಣ ಎಚ್.ಕೆ., ಟಿ.ಬಸವರಾಜ ನಾಯ್ಕ್, ಸದಸ್ಯ ಕಾರ್ಯದರ್ಶಿ ಡಾ.ಶಾಮರಾವ್ ಜಹಾಗೀರದಾರ್, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ವೈಕುಂಠ ಹೇರ್ಳೆ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರನ್ನು ಹಾಗೂ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಯಲ್ಲಿ 2020-21ರಿಂದ 2024- 25ರ ವರೆಗೆ ಪ್ರಥಮ ಸ್ಥಾನ ಪಡೆದು ವಿಜೇತರಾದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ತಾಂತ್ರಿಕ ಕೈಪಿಡಿ ಮತ್ತು ಹಸ್ತಪ್ರತಿಗಳನ್ನು ಬಿಡುಗಡೆ ಗೊಳಿಸಲಾಯಿತು.
ಉಡುಪಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯ ಶೆಟ್ಟಿ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪೂರ್ಣಿಮ ಜಿ.ಸಿ., ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕ್ಷಮಾ ಪಾಟೀಲ, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್, ಮಂಗಳೂರು ಕೆವಿಕೆ ಮುಖ್ಯಸ್ಥ ಟಿ.ಜೆ. ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ರೇವಣ್ಣ ರೇವಣ್ಣವರ ಸ್ವಾಗತಿಸಿದರು. ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ನವೀನ್ ಎನ್.ಈ ವಂದಿಸಿದರು. ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಪ್ರವೀಣ್ ಎಸ್. ಕಾರ್ಯಕ್ರಮ ನಿರೂಪಿಸಿದರು.
ಕೃಷಿ ಕಾಲೇಜು ಸ್ಥಾಪನೆಗೆ ಪ್ರಯತ್ನ
ಈ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆ ಆಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ಕರಾವಳಿ ಸಚಿವ ಸಂಪುಟದಲ್ಲಿ ಘೋಷಣೆ ಆಗುವ ಎಲ್ಲ ಲಕ್ಷಣಗಳಿದ್ದರೂ ಅದು ಕೆಲವೊಂದು ಕಾರಣಗಳಿಂದ ಮುಂದೂಡಲಾಗಿದೆ. ಈ ಸಂಬಂಧ ಸಚಿವರನ್ನು ಭೇಟಿ ಮಾಡಿದಾಗ ಕೃಷಿ ಕಾಲೇಜು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ವಿ.ಧನಂಜಯ ತಿಳಿಸಿದರು.






