ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಅರಣ್ಯ ಇಲಾಖೆ ವಿಳಂಬ ನೀತಿ ಅಡ್ಡಿ: ಮುಖ್ಯಮಂತ್ರಿಗೆ ಸಂಸದ ಕೋಟ ದೂರು

ಉಡುಪಿ, ಅ.17: ಜಿಲ್ಲೆಯಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕುಸುಮ್-ಸಿ ಯೋಜನೆಯ ಅನುಷ್ಠಾನಕ್ಕೆ ಅರಣ್ಯ ಇಲಾಖೆ ಮರಗಳ ತೆರವು ಪ್ರಕ್ರಿಯೆಯಲ್ಲಿ ವಿಳಂಬ ಮಾಡುವ ಮೂಲಕ ಅಡ್ಡಿಪಡಿಸುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರು ಅ.15ರಂದು ಉಚ್ಚಿಲ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿ ದ್ದಾಗ, ಕೋಟ ಅವರು ವೇದಿಕೆಯಲ್ಲೇ ಮುಖ್ಯಮಂತ್ರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಕುಸುಮ್-ಸಿ ಯೋಜನೆಯಡಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ದಲ್ಲಿ 13 ಎಕರೆ, ಬ್ರಹ್ಮಾವರ ತಾಲೂಕಿನ ಕಾವಡಿಯಲ್ಲಿ 7.5 ಎಕರೆ ಹಾಗೂ ಕಾಪು ತಾಲೂಕಿನ ಬೆಳ್ಳೆ ಗ್ರಾಮದಲ್ಲಿ 10 ಎಕರೆ ಜಾಗವನ್ನು ಸೌರ ವಿದ್ಯುತ್ ಘಟಕಗಳ ಸ್ಥಾಪನೆಗಾಗಿ ಗುರುತಿಸಲಾಗಿದೆ. ಆದರೆ, ಈ ಸ್ಥಳಗಳಲ್ಲಿರುವ ಮರಗಳ ತೆರವು ಕಾರ್ಯಕ್ಕೆ ಸಂಬಂಧಿಸಿ ದಂತೆ ಅರಣ್ಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಸುಮಾರು 22 ಕೋಟಿ ರೂ. ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ಕೋಟ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಜಿಲ್ಲೆಯ ರೈತರಿಗೆ ಯೋಜನೆಯ ಪ್ರಯೋಜನ ಸಕಾಲದಲ್ಲಿ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದ ಅನುದಾನ ವಾಪಾಸ್ಸು ಹೋಗುವ ಹಂತದಲ್ಲಿದೆ. ಈ ಬಗ್ಗೆ ಜುಲೈ 14ರಂದು ಕುಂದಾಪುರ ಶಾಸಕ ಕಿರಣ್ಕುಮಾರ್ ಕೊಡ್ಗಿ ಅವರೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ರನ್ನು ವಿಧಾನಸೌಧದಲ್ಲಿ ಖುದ್ದು ಭೇಟಿ ಮಾಡಿ ಚರ್ಚಿಸಿದ್ದೆವು. ಮುಖ್ಯ ಕಾರ್ಯದರ್ಶಿ, ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿ, ಸಮಸ್ಯೆ ಪರಿಹಾರ ಮಾಡುವಂತೆ ನಿರ್ದೇಶಿಸಿದ್ದರು ಎಂದು ಕೋಟ ವಿವರಿಸಿದ್ದಾರೆ.
ಅಲ್ಲದೇ ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಯೋಜನೆಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸುವಂತೆ ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಐದಕ್ಕಿಂತಲೂ ಹೆಚ್ಚು ಬಾರಿ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದೇವೆ. ಜಿಲ್ಲಾಧಿಕಾರಿಗಳು ಅಗತ್ಯ ಆದೇಶಗಳನ್ನು ನೀಡಿದ್ದರೂ, ಅರಣ್ಯ ಇಲಾಖೆ ಅಕೆಶಿಯಾ ಗಿಡಗಳ ತೆರವಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ತೋರುತ್ತಿರುವುದರಿಂದ ಯೋಜನೆ ಅನುಷ್ಠಾನ ಗೊಂಡಿಲ್ಲ ಎಂದು ಮುಖ್ಯಮಂತ್ರಿಗಳಿಗೆ ನೀಡಿದ ಪತ್ರದಲ್ಲಿ ಕೋಟ ತಿಳಿಸಿದ್ದಾರೆ.
ಕಳೆದ ತಿಂಗಳು ತಾವು ಹೆಬ್ರಿಗೆ ಬಂದ ಸಂದರ್ಭದಲ್ಲಿ ಈ ಬಗ್ಗೆ ತಮಗೆ ಮನವಿ ಸಲ್ಲಿಸಿದ್ದೆ. ಹೆಬ್ರಿಯಲ್ಲಿ ತಾವು ಹಾಗೂ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ನೀಡಿದ ಆದೇಶವನ್ನು ಅರಣ್ಯಾಧಿಕಾರಿಗಳು ಅನುಷ್ಠಾನ ಮಾಡುತ್ತಿಲ್ಲ. ಈ ಹಿನ್ನೆಲೆ ಯಲ್ಲಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಮರಗಳ ತೆರವು ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಉಡುಪಿ ಜಿಲ್ಲೆಯಲ್ಲಿ ಕುಸುಮ್-ಸಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸಂಸದ ಕೋಟ ಲಿಖಿತ ಮನವಿಯಲ್ಲಿ ಮತ್ತೊಮ್ಮೆ ಆಗ್ರಹಿಸಿದ್ದಾರೆ.






