ಉಡುಪಿ ಜಿಲ್ಲೆಯ ಎಂ-ಸ್ಯಾಂಡ್ ಕೇರಳಕ್ಕೆ ಅಕ್ರಮ ಸಾಗಣೆ; ಲಾರಿ-ಟೆಂಪೋ ಮಾಲಕರ ಸಂಘ ಆರೋಪ

ಉಡುಪಿ, ಅ.19: ಜಿಲ್ಲಾಡಳಿತ ಹೈಟೆಕ್ ಮರಳುಗಾರಿಕೆಗೆ ಅವಕಾಶ ನೀಡಿರುವುದರಿಂದ ಜನಸಾಮಾನ್ಯರಿಗೆ ಮರಳು ದುಬಾರಿಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಎಂ-ಸ್ಯಾಂಡ್‌ಗೆ ಹೆಚ್ಚಿನ ಬೇಡಿಕೆ ಇದ್ದರೂ, ಗಣಿ ಗುತ್ತಿಗೆದಾರರು ನೆರೆಯ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಎಂ-ಸ್ಯಾಂಡ್‌ನ್ನು ಅವ್ಯಾಹತವಾಗಿ ಸಾಗಾಟ ಮಾಡುತ್ತಿರುವುದನ್ನು ತಡೆ ಯಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಉಡುಪಿ ಜಿಲ್ಲಾ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ- ಟೆಂಪೋ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಕಲ್ಲು ಕ್ರಷರ್ ಘಟಕಗಳ ಮಾಲಕರೊಂದಿಗೆ ಶಾಮೀಲಾಗಿ ಕೇರಳಕ್ಕೆ ಎಂ-ಸ್ಯಾಂಡ್ ಸಾಗಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ಅವರು ದೂರಿದರು.
ಇಲಾಖೆಯ ಅಧಿಕಾರಿಗಳ ನಿರ್ಲಿಪ್ತ ಧೋರಣೆ ಅರಿತ ಕ್ರಷರ್ ಮಾಲಕರು ಅಥವಾ ಅವರಿಂದ ಒಪ್ಪಂದ ಮಾಡಿ ಕೊಂಡ ಕೆಲವರು ತಮ್ಮಲ್ಲಿ ಉತ್ಪಾದನೆ ಯಾಗುವ ಜಲ್ಲಿ ಎಂ.ಸ್ಯಾಂಡ್‌ನ್ನು ದಿನನಿತ್ಯ ಜಿಲ್ಲೆಯ ಹೊರಗೆ ಕಾನೂನು ಬಾಹಿರವಾಗಿ ಬೃಹತ್ ಗಾತ್ರದ ವಾಹನಗಳ ಮೂಲಕ ಸಾಗಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಎಂ.ಸ್ಯಾಂಡ್‌ಗೆ ಕೃತಕ ಅಭಾವ ಸೃಷ್ಟಿಯಾಗಿದೆ ಎಂದವರು ಹೇಳಿದರು.
ಇದರೊಂದಿಗೆ ಅದನ್ನೇ ನಂಬಿರುವ ಸ್ಥಳೀಯವಾಗಿ ಎಂ-ಸ್ಯಾಂಡ್ ಸಾಗಣೆ ಮಾಡುವ ಲಾರಿ ಮಾಲಕರು ಮತ್ತು ಚಾಲಕರ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ. ಕಲ್ಲು ಕ್ರಷರ್ ಘಟಕಗಳ ಮಾಲಕರು ಎಂ-ಸ್ಯಾಂಡ್‌ಗೆ ದುಬಾರಿ ಬೆಲೆ ವಿಧಿಸುತ್ತಿರುವುದರಿಂದ ಹಾಗೂ ಜಲ್ಲಿ ಕಲ್ಲು, ಶಿಲೆ ಕಲ್ಲು, ಕೆಂಪು ಕಲ್ಲುಗಳಿಗೆ ಮನಸ್ಸೋ ಇಚ್ಛೆ ದರ ನಿಗದಿ ಪಡಿಸುತ್ತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಿಸುವುದು ಕಷ್ಟವಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕಾನೂನುಬದ್ಧವಾಗಿ ಮರಳು ಸಾಗಿಸುವ ಸ್ಥಳೀಯ ಲಾರಿ ಮಾಲಕರು ಮತ್ತು ಚಾಲಕರಿಗೆ ಅಧಿಕಾರಿಗಳು, ಕೆಲ ಗಣಿ ಗುತ್ತಿಗೆದಾರರು ಕಿರುಕುಳ ನೀಡುತ್ತಿದ್ದರೆ, ಕೇರಳಕ್ಕೆ ಎಂ-ಸ್ಯಾಂಡ್ ಸಾಗಣೆ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಬೆಳ್ಳಣ್ಣು, ನಂದಿಕೂರು, ಬೆಳ್ಳೆ ಭಾಗದಿಂದ ಪಡುಬಿದ್ರಿ ಮತ್ತು ಮಂಗಳೂರು ಮಾರ್ಗವಾಗಿ ಕೇರಳದತ್ತ ಎಂ-ಸ್ಯಾಂಡ್ ತುಂಬಿದ ಹಲವು ಲಾರಿಗಳು ಅವ್ಯಾಗತವಾಗಿ ಸಂಚರಿಸುತ್ತಿದ್ದರೂ ಇಲಾಖೆ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾ ಗಲಿ ನಿಷ್ಕೃಯರಾಗಿ ನೋಡುತಿದ್ದಾರೆ ಎಂದು ರಾಘವೇಂದ್ರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಎಂ-ಸ್ಯಾಂಡ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಕ್ರಮ ಸಾಗಣಿಕೆ ಇದೇ ರೀತಿ ಮುಂದುವರಿದರೆ ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳು ಖಾಲಿಯಾಗುವ ಅಪಾಯವಿದೆ ಎಂದು ಎಚ್ಚರಿಸಿದಲ್ಲದೇ, ವಿವಿಧ ಸಂಘಟನೆಗಳೊಂದಿಗೆ ಸೇರಿ ಸಾರ್ವಜನಿಕರ ಪರವಾಗಿ ಮುಂದಿನ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಾರಿ-ಟೆಂಪೋ ಮಾಲಕರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕಟಪಾಡಿ, ರಮೇಶ್ ಶೆಟ್ಟಿ ಹೆರ್ಗ, ರವೀಂದ್ರ ಪಾಲನ್, ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.






