ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸಿ ದೀಪಾವಳಿ ಹಬ್ಬ ಆಚರಿಸಿ: ಉಡುಪಿ ಡಿಸಿ ಸ್ವರೂಪ ಟಿ.ಕೆ. ಮನವಿ

ಉಡುಪಿ: ಬೆಳಕಿನ ಹಬ್ಬವಾದ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿಗಳ ಮೂಲಕ ಆಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಉಡುಪಿ ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಸಿರು ಪಟಾಕಿಗಳ ಬಳಕೆ ಕುರಿತಂತೆ ಜಾಗೃತಿ ಮೂಡಿಸುವ ಮೂಲಕ ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ ನಡೆಯಬೇಕು. ಇವುಗಳ ಮಾರಾಟಕ್ಕೆ ಪರವಾನಿಗೆ ನೀಡುವಾಗ ಸುರಕ್ಷತಾ ದೃಷ್ಟಿಯಿಂದ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ತಾತ್ಕಾಲಿಕ ಸುಡುಮದ್ದು ಮಾರಾಟ ಮಾಡುವವರು ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು, ನಿಯಮಾನುಸಾರ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಯಾವುದೇ ಅನಾಹುತಗಳು ಸಂಭವಿಸ ದಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದರು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನಿಗದಿಪಡಿಸಿರುವ ತೆರೆದ ಪ್ರದೇಶಗಳಲ್ಲಿ ಪಟಾಕಿ ಮಾರಾಟದ 10*10 ವಿಸ್ತೀರ್ಣದ ಜಿಂಕ್ ಶೀಟ್ ಅಥವಾ ಅಗ್ನಿ ನಿರೋಧಕ ವಸ್ತುಗಳಿಂದ ಮಳಿಗೆಗಳನ್ನು ನಿರ್ಮಿಸಬೇಕು. ಮಳಿಗೆ ಗಳನ್ನು ಹರಾಜುಗಳ ಮೂಲಕ ಹಂಚಿಕೆ ಮಾಡಬೇಕು. ಈ ಪ್ರದೇಶದಲ್ಲಿ ಸಾರ್ವಜನಿಕರು ಹಾಗೂ ವಾಹನ ಗಳ ಚಲನವಲನಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಪಟಾಕಿ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳು ಆಗಿಂದಾಗ್ಗೆ ಭೇಟಿ ನೀಡಿ, ಹಸಿರು ಪಟಾಕಿಗಳ ಮಾರಾಟ, ಸುರಕ್ಷತೆಗಳ ಕುರಿತು ಪರಿಶೀಲನೆ ಮಾಡಬೇಕು. ಸುಡುಮದ್ದುಗಳನ್ನು ಅಧಿಕೃತ ಸಾಗಾಟ-ಮಾರಾಟದ ಪರವಾನಿಗೆ ಹೊಂದಿರುವವರಿಂದ ಹೊರತು ಪಡಿಸಿ ಇತರ ಅಕ್ರಮ ಚಿಲ್ಲರೆ ಸುಡುಮದ್ದು ಮಾರಾಟಗಾರರಿಂದ ಖರೀದಿಸುವು ದನ್ನು ನಿಷೇಧಿಸಲಾದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.
ಪಟಾಕಿ ಮಾರಾಟ ಮಳಿಗೆಗಳಲ್ಲಿ ಅಗ್ನಿನಂದಕಗಳು ಸುಸ್ಥಿತಿಯಲ್ಲಿರಬೇಕು. ನಿಯಮಾನುಸಾರ ನೀರು ಸಂಗ್ರಹಣೆ ಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರವಾನಿಗೆಯ ಅವಧಿ ನಂತರ ಮಳಿಗೆಯಲ್ಲಿ ಉಳಿದ ತ್ಯಾಜ್ಯದಿಂದ ಸುಡುಮದ್ದುಗಳನ್ನು ಬೇರ್ಪಡಿಸಿ ಮಾರಾಟಗಾರರೇ ತ್ಯಾಜ್ಯ ವಿಲೇವಾರಿ ಸಂಗ್ರಹಣಾ ಘಟಕಕ್ಕೆ ನೀಡಬೇಕು ಎಂದರು.
ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಮೊದಲು ತಹಶೀಲ್ದಾರ್ ನೇತೃತ್ವದ ಸಮಿತಿ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಅಂಗಡಿ ಮುಂಗಟ್ಟುಗಳ ಸಮೀಪದಲ್ಲಿ, ಜನನಿಬಿಡ ಪ್ರದೇಶ ಗಳಲ್ಲಿ, ಸಂಚಾರ ವ್ಯವಸ್ಥೆಗೆ ಅಡಚಣೆಯಾಗುವ ಕಡೆಗಳಲ್ಲಿ, ಪಟಾಕಿ ಮಳಿಗೆ ಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದ ಅವರು ಸಾರ್ವಜನಿಕರ ಆರೋಗ್ಯಕ್ಕೆ ಹಾಗೂ ಪರಿಸರ ಮಾಲಿನ್ಯಕ್ಕೆ ಧಕ್ಕೆ ಉಂಟಾಗದಂತೆ ನೋಡಿ ಕೊಳ್ಳಬೇಕು ಎಂದರು.
ಹಸಿರು ಪಟಾಕಿಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಹಾಗೂ ಕ್ಯೂಆರ್ ಕೋಡ್ ಇದ್ದು, ಸದ್ರಿ ಚಿಹ್ನೆ ಹೊಂದಿರುವ ಬಗ್ಗೆ ಪರಿಸರ ಅಧಿಕಾರಿ ಗಳು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಹಸಿರು ಪಟಾಕಿಯ ಚಿಹ್ನೆ ಇಲ್ಲದೇ ಇದ್ದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ, ನಗರಸಭೆ ಆಯುಕ್ತ ಮಹಾಂತೇಶ ಹಂಗರಗಿ, ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿ ಗಳು, ತಹಶೀಲ್ದಾರರು ಹಾಗೂ ಇತರರು ಉಪಸ್ಥಿತರಿದ್ದರು.






