ಫಿಲಾಟಲಿ ಪಯಣ ಅಂಚೆಚೀಟಿ ಪ್ರದರ್ಶನ ಉದ್ಘಾಟನೆ

ಉಡುಪಿ, ಅ.23: ಭಾರತೀಯ ಅಂಚೆ ಉಡುಪಿ ಅಂಚೆ ವಿಭಾಗ, ಉಡುಪ ರತ್ನ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಸಹಯೋಗದೊಂದಿಗೆ ಬನ್ನಂಜೆ ಉಪ ಅಂಚೆ ಕಚೇರಿಯ ಅಂಚೆ ಪಾಲಕಿ ಪೂರ್ಣಿಮಾ ಜನಾರ್ದನ್ ಅವರ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಫಿಲಾಟಲಿ ಪಯಣ ಅಂಚೆ ಚೀಟಿ ಪ್ರದರ್ಶನವನ್ನು ಕೊಡವೂರಿನ ಭಾಮಾ ಫಿಲಾಟಲಿ ಗ್ಯಾಲರಿಯಲ್ಲಿ ಅ.21ರಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಮಾತನಾಡಿ, ಅಂಚೆ ವಿಭಾಗವು ಆಧುನಿಕ ಜಾಲತಾಣದ ಈ ಯುಗದಲ್ಲೂ ವಿವಿಧ ರೀತಿಯ ಹೊಸ ಆಯಾಮಗಳಿಗೆ ತೆರೆದು ಕೊಂಡು ಜನಸ್ನೇಹಿ ಇಲಾಖೆಯಾಗಿ ಗುರುತಿಸಿಕೊಂಡಿದೆ. ಯುವ ಜನಾಂಗಕ್ಕೆ ಅಂಚೆ ಸೇವೆಗಳನ್ನು ಪರಿಚಯ ಹಾಗೂ ಫಿಲಾಟೆಲಿ ವಿಷಯದ ಅರಿವು ಮೂಡಿಸುವ ಸಲುವಾಗಿ ಫಿಲಾಟೆಲಿ ಪಾಸ್‌ಪೋರ್ಟ್‌ನ್ನು ಪರಿಚಯಿಸಿದ್ದೆ ಅಲ್ಲದೆ ಸಾಮಾಜಿಕ ಜಾಲತಾಣಗಳ ಮೂಲಕ ಅಂಚೆ ಇಲಾಖೆಯ ಇತರ ಸೇವೆಗಳ ಬಗ್ಗೆ ಸೂಕ್ತ ಪ್ರಚಾರ ನಡೆಸಲಾಗುತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕೆಎಂಸಿ ಮಣಿಪಾಲದ ಎಲುಬು ಮತ್ತು ಮೂಳೆ ರೋಗ ವಿಭಾಗ ತಜ್ಞ ಹಾಗೂ ಮುಖ್ಯಸ್ಥ ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯೂಮಿಸ್ ಮ್ಯಾಟಿಕ್ ಕ್ಲಬ್(ಎಮ್‌ಪಿನ್‌ಸಿ) ಅಧ್ಯಕ್ಷ ಡಾ.ಕಿರಣ್ ಆಚಾರ್ಯ ಮಾತ ನಾಡಿ, ಅಂಚೆ ಚೀಟಿ ಸಂಗ್ರಹಣ ಹವ್ಯಾಸವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಲು ಸಹಕಾರಿ ಅದರಲ್ಲಿಯೂ ಕೂಡ ಅಲ್ಜೀಮರ್‌ನಂತಹ ಕಾಯಿಲೆಗಳು ಬರದಂತೆ ತಡೆಯಲು ಸಾಧ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಕೊಡವೂರು ಶಂಕರ ನಾರಾಯಣ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಮತ್ತು ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಮಂಜುನಾಥ್ ಭಟ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂಚೆ ಚೀಟಿ ಸಂಗ್ರಾಹಕ ಅಮ್ಮುಂಜೆ ನಾಗೇಂದ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಚಂದ್ರ ನಾಯ್ಕ್, ಕಸಾಪ ಉಡುಪಿ ತಾಲೂಕು ಪದಾಧಿಕಾರಿಗಳಾದ ರಂಜನಿ ವಸಂತ್, ಸತೀಶ್ ಕೊಡವೂರು, ಆರ್. ವಸಂತ್ ಉಪಸ್ಥಿತರಿದ್ದರು.
ಜನಾರ್ದನ್ ಕೊಡವೂರು ಸ್ವಾಗತಿಸಿದರು. ಸಾಹಿತಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ರಂಗ ಗೀತೆ ಹಾಡಿದರು. ಅಂಚೆ ಚೀಟಿ ಸಂಗ್ರಾಹಕಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.






