ಕುಂದಾಪುರ: ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಆಗ್ರಹಿಸಿ ಧರಣಿ

ಕುಂದಾಪುರ, ಅ.23: ಮತದಾರರ ಹಕ್ಕುಗಳ ರಕ್ಷಣೆ, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಖಾತರಿಪಡಿಸುವಂತೆ ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಮಾನಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಕುಂದಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕುಂದಾಪುರದ ನೆಹರೂ ಮೈದಾನದಿಂದ ಪ್ರಾರಂಭಗೊಂಡ ವಾಹನ ಜಾಥಾವು ತೆಕ್ಕಟ್ಟೆ, ಕೊಮೆ, ಕೋಡಿ ಹಾಗೂ ವಿನಾಯಕ ಮಾರ್ಗವಾಗಿ ಸಾಗಿತು. ಬಳಿಕ ಶಾಸ್ತ್ರಿ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯ ನಂತರ ಪ್ರತಿಭಟನಾಕಾರರು ಪಾದಯಾತ್ರೆಯ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಪಾಲರಿಗೆ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸಲ್ಲಿಸಿದರು.
ಇವಿಎಂ ಬಳಕೆಯನ್ನು ರದ್ದುಗೊಳಿಸಿ ಮತಪತ್ರಗಳ ಮೂಲಕ ಮತದಾನ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯ್ದೆ, 2023ರ ಸೆಕ್ಷನ್ 16 ಅನ್ನು ರದ್ದು ಗೊಳಿಸಬೇಕು. ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಆಗ್ರಹಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡ ಬೇಕು. ಅರ್ಹ ಮತದಾರರ ಹೆಸರುಗಳನ್ನು ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಕೈಬಿಡುವುದನ್ನು ತಡೆಯಬೇಕು, ಆಕ್ಷೇಪಣೆ ಮತ್ತು ಮೇಲ್ಮನವಿಗಳಿಗೆ ಪರಿಣಾಮಕಾರಿ ಅವಕಾಶ ಕಲ್ಪಿಸಬೇಕು ಹಾಗೂ ಮತದಾರರ ದೂರುಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಸಿಪಿಐ(ಎಂ) ನಾಯಕ ಚಂದ್ರಶೇಖರ್, ಸಹಬಾಳ್ವೆ ಕುಂದಾಪುರದ ಅಧ್ಯಕ್ಷ ರಾಮಕೃಷ್ಣ ಹೆರಳೆ, ವಕೀಲ ಮಂಜುನಾಥ ಗಿಳಿಯಾರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿದರು.
ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ರೋಶನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೃಷ್ಣ ಪೂಜಾರಿ ಅಮಾಸೆಬೈಲು, ಸುರೇಶ್ ಶೆಟ್ಟಿ ಹೈಕಾಡಿ, ಅಶೋಕ್ ಶೆಟ್ಟಿ ಚೋರಾಡಿ, ಇಚ್ಚಿತಾರ್ಥ ಶೆಟ್ಟಿ ಹಾಗೂ ರಿಯಾಜ್ ಕೋಡಿ, ಸಿಪಿಐ(ಎಂ)ನ ವಿ.ನರಸಿಂಹ ಮತ್ತು ಎಚ್.ನರಸಿಂಹ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರಿರ್ಗಾ, ಮಾಜಿ ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ ಮತ್ತು ಅಬು ಮೊಹಮ್ಮದ್, ನಾಮನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ ಮತ್ತು ಶಶಿರ್ಧ ಕೋಟೆ, ಪ್ರಮುಖರಾದ ಶೇಖರ್ ಚಾತ್ರಬೆಟ್ಟು ಹಾಗೂ ಸದಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.






