ಲೈಂಗಿಕ ದೌರ್ಜನ್ಯ ಗಂಡು ಮಕ್ಕಳಿಗೂ ಅನ್ವಯಿಸುತ್ತದೆ: ನ್ಯಾ.ಜ್ಯೋತಿಶ್ರೀ

ಕುಂದಾಪುರ, ಅ.24: ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿರುವುದರಿಂದ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪೋಕ್ಸ್ಸೊ ಕಾಯ್ದೆ ಜಾರಿಗೆ ಬಂದಿದೆ. ಲೈಂಗಿಕ ದೌರ್ಜನ್ಯ ಕೇವಲ ಹೆಣ್ಣು ಮಕ್ಕಳಿಗೆ ಸೀಮಿತ ವಾಗಿಲ್ಲ, ಗಂಡು ಮಕ್ಕಳಿಗೂ ಅನ್ವಯಿಸುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎಸ್.ಜ್ಯೋತಿಶ್ರೀ ಹೇಳಿದ್ದಾರೆ.
ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅಭಿಯೋಗ ಇಲಾಖೆ, ಕುಂದಾಪುರ ಶಿಶು ಅಭಿವೃದ್ಧಿ ಯೋಜನೆ ಮತ್ತು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಫೋಕ್ಸೋ ಕಾಯ್ದೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕ್ಷಣಿಕ ಆಕರ್ಷಣೆಗೆ ಒಳಗಾದರೆ ಇಬ್ಬರ ಜೀವನ ಹಾಳಾಗುತ್ತದೆ. ಈ ಕಾಯ್ದೆಯಲ್ಲಿ ಬಂಧಿತರಾದ ಗಂಡು ಮಕ್ಕಳಿಗೆ ಕೆಲವೊಂದು ಸಂದರ್ಭದಲ್ಲಿ ಜಾಮೀನು ಕೂಡ ಸಿಗುದಿಲ್ಲ. ಜೀವಮಾನವೆಲ್ಲ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಜವಾಬ್ದಾರಿ ಯಿಂದ ನಡೆದುಕೊಳ್ಳಬೇಕು, ಓದುವ ನಿಟ್ಟಿನಲ್ಲಿ ಗಮನ ಕೇಂದ್ರಿಕರಿಸಬೇಕು. ಪ್ರತಿಯೊಂದು ದಿನವೂ ಹೆಣ್ಣು ಮಕ್ಕಳು ಜವಾಬ್ದಾರಿಯಿಂದ ಇರಬೇಕು ಎಂದರು.
ಕಾನೂನಿನ ಅಡಿಯಲ್ಲಿ ಯಾವುದನ್ನು ಅಪರಾಧ ಅಂತ ಹೇಳಿದ್ದಾರೆ ಅದನ್ನು ದಯವಿಟ್ಟು ಮಾಡಲು ಹೋಗಬಾರದು. ಅಂತಹ ದುಸ್ಸಾಹಕ್ಕೆ ಹೋಗ ಬಾರದು, ಅಂತಹ ತಪ್ಪನ್ನು ಮಾಡಬಾರದು. ಅಂತಹ ಕೆಲಸಗಳಿಗೆ ಕೈ ಹಾಕಬಾ ರದು. ಸಮಾಜದಲ್ಲಿ ಗೌರವಾನ್ವಿತ ಪ್ರಜೆಗಳಾಗಿ ಬಾಳಲು ಗಮನ ಹರಿಸಬೇಕು. ಭವಿಷ್ಯವನ್ನು ರೂಪಿಸಿಕೊಳ್ಳುವ ಈ ಪ್ರಾಯದಲ್ಲಿ ತಪ್ಪು ಹೆಜ್ಜೆಗಳನ್ನು ಇಡಬೇಡಿ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ. ವಹಿಸಿದ್ದರು. ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಜೆ.ಶ್ರೀನಾಥ ರಾವ್ ಶುಭ ಹಾರೈಸಿದರು. ಕುಂದಾಪುರದ ಬಾರ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರೆಕಾಲಿಕ ಸ್ವಯಂಸೇವಕಿ ಫಿಲೋಮಿನಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲ ರಾಘವೇಂದ್ರ ಚರಣ್ ನಾವಡ ಫೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಸುಪ್ರೀತಾ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.






