ನಾಡದೋಣಿಗಳಿಗೆ ಸೀಮೆಎಣ್ಣೆ ಸಬ್ಸಿಡಿ ಹೆಚ್ಚಿಸಿ: ಸಿಎಂಗೆ ಶಾಸಕ ಯಶ್ಪಾಲ್ ಮನವಿ

ಉಡುಪಿ: ಕರಾವಳಿಯ ನಾಡದೋಣಿ ಮೀನುಗಾರರು ಸೀಮೆಎಣ್ಣೆ ಬೆಲೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಡದೋಣಿಗಳಿಗೆ ನೀಡುವ ಸೀಮೆಎಣ್ಣೆ ಸಬ್ಸಿಡಿಯನ್ನು ಹೆಚ್ಚಿಸಿ, ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಉಡುಪಿಯ ಶಾಸಕ ಯಶಪಾಲ್ ಎ.ಸುವರ್ಣ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಅರ್ಪಿಸಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳು ಇತ್ತೀಚೆಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಯಶಪಾಲ್ ಈ ಮನವಿ ಅರ್ಪಿಸಿದ್ದರು. ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿಗಾಗಿ ನೂತನ ಜಟ್ಟಿ ನಿರ್ಮಾಣ, ಔಟರ್ ಹಾರ್ಬರ್ ನಿರ್ಮಾಣ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವಂತೆ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.
ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ವಿಶೇಷ ಚೇತನ ಮಕ್ಕಳ ಶಿಕ್ಷಕರು, ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿ ಹಾಗೂ ಸರಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು. ಅವರ ಸೇವೆಗೆ ತಕ್ಕಂತೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಿ, ಆರ್ಥಿಕ ಸ್ಥಿರತೆ ಮತ್ತು ಉದ್ಯೋಗ ಭದ್ರತೆ ಖಚಿತಪಡಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕಾಲುಸಂಕ, ತಡೆಗೋಡೆ ಹಾಗೂ ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 50 ಕೋಟಿ ವಿಶೇಷ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡು ವಂತೆ, ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಕಟ್ಟಡ ನಿರ್ಮಾಣ ಸಾಮಗ್ರಿ ಲಭ್ಯತೆಗಾಗಿ ಕ್ವಾರಿ, ಸ್ಟೋನ್ ಕ್ರಷರ್ ಹಾಗೂ ಎಂ-ಸ್ಯಾಂಡ್ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.






