ಮಹಿಳೆಯರಿಗೆ ಸೀರೆ ಕುಚ್ಚು, ಡ್ರೇಪಿಂಗ್ ತರಬೇತಿ ಸಮಾರೋಪ

ಕಾರ್ಕಳ, ಅ.24: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಟಿಎಂಜಿ ಸುನಿಧಿ ಫೌಂಡೇಶನ್ ಮತ್ತು ಎಂಪಿಐಎಸ್ ಮಣಿಪಾಲ, ಗ್ರಾಮ ಪಂಚಾಯತ್ ಕುಕ್ಕುಂದೂರು ಹಾಗೂ ತುಳಸಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕುಕ್ಕುಂದೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ 10 ದಿನಗಳ ಸೀರೆ ಕುಚ್ಚು, ಸೀರೆ ಡ್ರೇಪಿಂಗ್ ಮತ್ತು ಬಾಕ್ಸ್ ಫೋಲ್ಡಿಂಗ್ ತರಬೇತಿಯ ಸಮಾರೋಪ ಸಮಾರಂಭ ಕುಕ್ಕುಂದೂರಿನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಭಾರತೀಯ ವಿಕಾಸ ಟ್ರಸ್ಟ್ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ತಾವು ಕಲಿತ ವಿದ್ಯೆಯನ್ನು ಮುಂದುವರಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕೆಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಪಂಚಾಯತ್ ಕಾರ್ಯದರ್ಶಿ ನಾರಾಯಣ ಮಾತನಾಡಿ, ಮಹಿಳೆಯರು ವಿಶೇಷ ಪರಿಶ್ರಮ ದಿಂದ ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸುಕಾಣಲು ಸಾದ್ಯ. ಇಲ್ಲಿ 10 ದಿನಗಳಲ್ಲಿ ಕಲಿತ ವಿದ್ಯೆ ಯನ್ನು ಸ್ವಂತಕ್ಕೆ ಬಳಸುವುದಷ್ಟೇ ಅಲ್ಲ, ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಕಿವಿಮಾತು ಹೇಳಿದರು.
ಸಂಜೀವಿನಿ ತಾಲೂಕು ವ್ಯವಸ್ಥಾಪಕರಾದ ಉಮಾ ಮಾತನಾಡಿ, ಮಹಿಳೆ ಯರು ಇಂಥ ತರಬೇತಿಯನ್ನು ಪಡೆದು ಸ್ವಾವಲಂಬಿಗಳಾಗಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡಲು ಸಂಜೀವಿನಿ ಒಕ್ಕೂಟ ಸದಾ ಸಿದ್ಧವಿದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ತುಳಸಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲಾರಾಣಿ, ಸಂಪನ್ಮೂಲ ವ್ಯಕ್ತಿ ವಿಶಾಲ, ಸಂಜೀವಿನಿಯ ಸುಕೇತ ಮತ್ತು ಎಂಬಿಕೆ ಸುಮನ ರಾವ್ ಉಪಸ್ಥಿತರಿದ್ದರು. ಈ ತರಬೇತಿಯಿಂದ ಒಟ್ಟು 30 ಮಹಿಳೆಯರು ಪ್ರಯೋಜನ ಪಡೆದು ಕೊಂಡರು.






