ಸರಕಾರಿ ಯೋಜನೆಗಳ ಪ್ರಯೋಜನ ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯ: ಡಿಸಿ ಸ್ವರೂಪಾ ಟಿ.ಕೆ.

ಕುಂದಾಪುರ: ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಸರಕಾರಿ ಯೋಜನೆಗಳ ಪ್ರಯೋಜನ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಸೇವೆಯನ್ನೇ ಧರ್ಮವೆಂದು ಪರಿಗಣಿಸಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದ್ದಾರೆ.
ತಲ್ಲೂರಿನ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್‌ನ ಸಭಾಭವನದಲ್ಲಿ ಶನಿವಾರ ನಡೆದ ಕುಂದಾಪುರ ತಾಲೂಕು ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಹೋಬಳಿ ಮಟ್ಟದ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಜಾಸೇವೆ ಆಂದೋಲನ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತಿದ್ದರು.
ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ವಿವಿಧ ಇಲಾಖೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಈ ಹಿಂದೆ ನಡೆದ ಜನಸಂಪರ್ಕ ಹಾಗೂ ಜನಸ್ಪಂದನ ಕಾರ್ಯಕ್ರಮಗಳ ಮಾದರಿ ಯಲ್ಲೇ ಪ್ರಜಾಸೇವೆ ಆಂದೋಲನ ನಡೆಯುತ್ತಿದೆ. ಇದು ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮವಾಗದೆ, ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವ ವೇದಿಕೆಯಾಗಬೇಕು ಎಂದರು.
ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್., ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಡಿಡಿಪಿಐ ಸಿ.ಲೋಕೇಶ್, ಡಿಎಫ್‌ಒ ಶಶಿಕಾಂತ್ ಸೇರಿದಂತೆ 22 ಇಲಾಖೆಗಳ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳು, ಸಿಬಂದಿ ಮತ್ತು ನಾಗರಿಕರು ಉಪಸ್ಥಿತರಿದ್ದರು.
ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸ್ವಾಗತಿಸಿದರು. ಶಿಕ್ಷಕ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿದರು. ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಡಿ. ವಂದಿಸಿದರು.
390 ಅರ್ಜಿಗಳ ಸ್ವೀಕಾರ
ಪ್ರಜಾಸೇವೆ ಆಂದೋಲನ ಸಭೆಯಲ್ಲಿ ವಂಡ್ಸೆ ಹೋಬಳಿ ವ್ಯಾಪ್ತಿಯ ನಾಗರಿಕರಿಂದ ವಿದ್ಯುತ್, ಗೃಹಲಕ್ಷ್ಮೀ ಯೋಜನೆ, ರಸ್ತೆ ಅಭಿವೃದ್ಧಿ, ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಇಲಾಖೆಗಳ ಸಂಬಂಧಿಸಿದಂತೆ ಒಟ್ಟು 390 ಅರ್ಜಿಗಳು ಸಲ್ಲಿಕೆಯಾದವು.
ಇವುಗಳಲ್ಲಿ 250ಕ್ಕೂ ಮಿಕ್ಕಿ ಅರ್ಜಿಗಳು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಾಗೂ 100ಕ್ಕೂ ಮಿಕ್ಕಿ ಅರ್ಜಿಗಳು ರಸ್ತೆ ನಿರ್ಮಾಣ, ಅಭಿವೃದ್ಧಿ ಮತ್ತು ಅಗಲೀಕರಣಕ್ಕೆ ಸಂಬಂಧಿಸಿದ್ದವು.






