ಮಠಮಂದಿರಗಳು ಬಡವರಲ್ಲಿ ದೇವರನ್ನು ಕಾಣುವ ಕಾರ್ಯ ಮಾಡಬೇಕು: ಕೇಮಾರು ಶ್ರೀ

ಕುಂದಾಪುರ, ಅ.26: ದೇವಸ್ಥಾನಗಳು, ಮಠ ಮಂದಿರಗಳು ಬಡವರಲ್ಲಿ ದೇವರನ್ನು ಕಾಣುವ ದೊಡ್ಡ ಕೆಲಸವನ್ನು ಮಾಡಬೇಕು. ಭಗವದ್ಗೀತೆಯ ಸಾರವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುಬೇಕು. ಭಗವಂತನ ಅನುಗ್ರಹ ಪ್ರಾಪ್ತಿ ಯಾಗಬೇಕಾದರೆ ಯಜ್ಞ ಯಾಗಾದಿಗಳನ್ನು ಮಾಡುವ ಅವಶ್ಯಕತೆ ಇಲ್ಲ. ಸತತ ದೇವರ ಸ್ಮರಣೆ ಮಾಡುತ್ತಿರಬೇಕು ಎಂದು ಶ್ರೀಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಹಟ್ಟಿಯಂಗಡಿ ಶ್ರೀಕ್ಷೇತ್ರ ಮಾರಲದೇವಿ ದೇವಸ್ಥಾನದ ಶ್ರೀಮಾರಲದೇವಿ ಭಜನಾ ಮಂಡಳಿ ಇದರ ಸುವರ್ಣ ಸಂಭ್ರಮ ಭಜನೋತ್ಸವದ ಧಾರ್ಮಿಕ ಸಮಾರಂಭದಲ್ಲಿ ರವಿವಾರ ಅವರು ಆಶೀರ್ವಚನ ನೀಡಿದರು.
ಕಾಲ ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳು ದೂರವಾಗುತ್ತಿವೆ. ಮನೆಗಳಲ್ಲಿ ತಂದೆ-ತಾಯಿ, ಹಿರಿಯರಿಂದ ಉಪದೇಶಗಳು ಕಡಿಮೆಯಾಗುತ್ತಿವೆ. ಇದು ಮಕ್ಕಳನ್ನು ಮಾದಕ ವ್ಯಸನ, ಕೆಟ್ಟ ಆಲೋಚನೆಗಳ ಕಡೆಗೆ ಕರೆದೊಯ್ಯುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಂಸ್ಕೃತಿ ಮತ್ತು ಸಂಪ್ರದಾಯ ಆಚರಣೆಗಳನ್ನು ಬೆಳಸುವುದು, ತಿಳಿಸುವುದು ತೀರಾ ಅಗತ್ಯ ಎಂದರು.
ಸುವರ್ಣ ಸಂಭ್ರಮ ಭಜನೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಹಟ್ಟಿಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಚ್.ಬಾಲಚಂದ್ರ ಭಟ್, ಕುಂದ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ ಕೆ.ಸಿ. ಮತ್ತು ಗಿಳಿಯಾರು ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿರ್ಯಾ ಶುಭಾಶಂಸನೆಗೈದರು.
ಈ ಸಂದರ್ಭ ಕಳೆದ 50 ವರ್ಷಗಳಿಂದ ಭಜನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಭಜನಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಕ್ಷೇತ್ರ ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಮಾಜಿ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಹಟ್ಟಿಯಂಗಡಿ ಜೈನ ಬಸದಿಯ ಸುರೇಂದ್ರ ಕುಮಾರ್ ಜೈನ್, ಶ್ರೀಮಾರಲದೇವಿ ಭಜನಾ ಮಂಡಳಿ ಅಧ್ಯಕ್ಷ ರತ್ನಾಕರ ಶೆಟ್ಟಿ ತುಪ್ಪಾರಬೆಟ್ಟು ಉಪಸ್ಥಿತರಿದ್ದರು.
ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಭಿಜಿತ್ ಕಾರ್ಯಕ್ರಮ ನಿರ್ವಹಿಸಿದರು.






