ಉಡುಪಿ: ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಉಡುಪಿ, ಅ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್‌ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಇಂದು ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ, ಸಮಾಜದಲ್ಲಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಉತ್ಕೃಷ್ಟ ಆಡಳಿತ ನೀಡಿದ ರಾಮನ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿಯವರ ಹೆಸರಿನಲ್ಲಿ ಜಾರಿ ಗೊಂಡಿರುವ ಸರಕಾರದ ಯೋಜನೆಗಳು ನ್ಯಾಯಯುತವಾಗಿ ಸಮುದಾಯದ ಕೈ ಸೇರಿದಾಗ ಜಯಂತಿ ಆಚರಣೆಗಳು ಅರ್ಥಪೂರ್ಣವಾಗುತ್ತದೆ ಎಂದರು.
ಸರಕಾರವು ಪ.ಜಾತಿ ಹಾಗೂ ಪ.ಪಂಗಡದ ಸಮುದಾಯದವರಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸಗಳನ್ನು ಇಲಾಖೆಗಳು ಕೈಗೊಳ್ಳಬೇಕು. ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಅದು ತಲುಪಬೇಕು. ಕೊರಗ ಸಮುದಾಯವು ಕಳೆದ ಕೆಲವು ತಿಂಗಳು ಗಳಿಂದ ವಿಮೆ, ಆಹಾರದ ಕಿಟ್, ಹಾಗೂ ವಿದ್ಯಾರ್ಥಿವೇತನ ದೊರಕದೆ ಸಮಸ್ಯೆ ಎದುರಿಸುತ್ತಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಮಹರ್ಷಿ ವಾಲ್ಮೀಕಿಗಳ ಜೀವನವು ನಮಗೆ ಬದುಕಿನ ಬದಲಾವಣೆಯ ಘಟ್ಟಗಳನ್ನು ತಿಳಿಸುತ್ತದೆ. ನಾವು ಮಾಡುವ ಸತ್ಕರ್ಮಗಳು ಬದುಕಿದ್ದಾಗಲೂ ನಾವು ಈ ಜಗತ್ತನ್ನು ಬಿಟ್ಟು ಹೋದಾಗಲೂ ನಮ್ಮ ಜೊತೆ ಬರುತ್ತದೆ. ಎರಡನೆಯದಾಗಿ ಒಂದು ಕ್ಷಣದ ಒಂದು ಆಲೋಚನೆ ಹೇಗೆ ನಮ್ಮ ಬದುಕನ್ನು ಬದಲಾಯಿಸಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ ಎಂದರು.
ಶ್ರೀನಾರಾಯಣಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿದರು. ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪ ಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ವ್ಯಕ್ತಿತ್ವದ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ 619 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚೇರ್ಕಾಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮಂಜುನಾಥ್ ಇವರಿಗೆ 1 ಲಕ್ಷ ರೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಪದವಿಪೂರ್ವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮನೀಷಾ, ಅಶ್ವಿತಾ, ಶ್ರಾವ್ಯ, ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸ್ವಸ್ತಿ, ಲಾವಣ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನೋಣಯ್ಯ ರೆಂಜಾಳ, ಡಾ.ಅಶ್ವಿತಾ ಹಾಗೂ ಮಹಾಬಲ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯಕ್, ಪರಿಶಿಷ್ಟ ವರ್ಗಗಳ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಸ್ವಾಗತಿಸಿ, ಐಟಿಡಿಪಿ ಸಿಬ್ಬಂದಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






