ಜ್ಯೋತಿಷ್ಯಶಾಸ್ತ್ರದ ಕುರಿತು ಹೆಚ್ಚಿನ ಚಿಂತನೆ ಅಗತ್ಯ: ಕಾಣಿಯೂರು ಶ್ರೀ

ಉಡುಪಿ, ಅ.31: ಜ್ಯೋತಿಷ ಶಾಸ್ತ್ರವು ಮೂಢನಂಬಿಕೆಯಲ್ಲ. ಅದು ಸ್ಪಷ್ಟವಾಗಿ ಲಾಭ-ನಷ್ಟದ ಫಲ ಹೇಳುವ ಜ್ಞಾನವಾಗಿದೆ. ಶಾಸ್ತ್ರ ಎಂದಿಗೂ ಸುಳ್ಳಲ್ಲ. ಆದರೆ, ಜ್ಯೋತಿಷ್ಯ ಹೇಳುವವರಿಗೆ ಸಮರ್ಪಕ ಜ್ಞಾನ ಅಗತ್ಯ. ಈ ಶಾಸ್ತ್ರದ ಕುರಿತು ಹೆಚ್ಚಿನ ಚಿಂತನೆ ಆಗಬೇಕಾಗಿದೆ. ಯುವಸಮುದಾಯ ಈ ಜ್ಞಾನದ ಲಾಭ ಪಡೆಯುವಂತಾಗ ಬೇಕು. ಮನುಷ್ಯನ ಭವಿಷ್ಯ ತಿಳಿಸುವುದೇ ಜೋತಿಷ ಶಾಸ್ತ್ರವಾಗಿದೆ ಎಂದು ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯ ನುಕ್ಸರ್, ಸೆಂಟರ್ ಫಾರ್ ಇಂಡಿಯನ್ ನಾಲೇಜ್ ಸಿಸ್ಟಮ್ ವತಿಯಿಂದ ಪರ್ಯಾಯ ಶೀರೂರು ಮಠ, ಶ್ರೀಕೃಷ್ಣ ಮಠ ಉಡುಪಿ ಸಹಭಾಗಿತ್ವದಲ್ಲಿ ಶನಿವಾರ ಉಡುಪಿಯ ಶ್ರೀಮನ್‌ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಕಾಲೇಜ್‌ನ ಭೀಮ ಸಭಾಂಗಣಂನಲ್ಲಿ ಆಯೋಜಿಸ ಲಾದ ’ಜ್ಯೋರ್ತಿವಿಜ್ಞಾನಮ್’ ಜ್ಞಾನ-ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮಾತನಾಡಿ, ಯಾರಿಗೆ ಭಾರತದ ಇತಿಹಾದ ಬಗ್ಗೆ ಗೌರವ, ಜ್ಞಾನ ಇಲ್ಲವೋ ಅವರಿಗೆ ಭವಿಷ್ಯವಿಲ್ಲ. ಶಿಕ್ಷಣವು ನಿನ್ನೆ ಮತ್ತು ನಾಳೆಗಳ ಮಧ್ಯೆ ಸೇತುವೆ ಆಗಬೇಕು. ದೇಶದ ಎಲ್ಲ ವಿವಿಗಳು ಭಾರತೀಯತೆ ಮಹತ್ವವನ್ನು ವಿಶ್ಕಕೆ ಪ್ರದರ್ಶಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದರು.
ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ತಿರುಪತಿಯ ನಿವೃತ್ತ ಜ್ಯೋತಿಷ ಪ್ರಾಧ್ಯಾಪಕ ಪ್ರೊ.ಎ.ಶ್ರೀಪಾದ ಭಟ್ಟ ದಿಕ್ಸೂಚಿ ಭಾಷಣ ಮಾಡಿದರು. ಕೆನರಾ ಬ್ಯಾಂಕ್ ಉಡುಪಿ ವಿಭಾಗೀಯ ಎಜಿಎಂ ಟಿಎಸ್‌ಎನ್ ಪೂರ್ಣಾನಂದ, ವಿದ್ವಾಂಸ ರಾದ ಡಾ.ಬಿ.ಗೋಪಾಲ ಆಚಾರ್ಯ, ಪ್ರೊ. ಸುಧೀರರಾಜ್ ಕೆ., ಕಾಲೇಜ್‌ನ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ’ಜ್ಯೋರ್ತಿವಿಜ್ಞಾನಮ್’ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾಲೇಜ್‌ನ ಜ್ಯೋತಿಷ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಚಾಲಕ ಪ್ರೊ.ಡಿ.ಶಿವಪ್ರಸಾದ ತಂತ್ರಿ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾನಿಲ ಯದ ನುಕ್ಸರ್ ನಿರ್ದೇಶಕ ಪ್ರೊ.ಅನಿರ್ಬಾನ್ ಚಕ್ರವರ್ತಿ ವಂದಿಸಿದರು. ಸಂಸ್ಕೃತ ಕಾಲೇಜಿನ ಅಲಂಕಾರ ಶಾಸ್ತ್ರ ವಿಭಾಗದ ಮುಖ್ಯಸ್ಥ ಮಹೇಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ನಿಟ್ಟೆ ನುಕ್ಸರ್ನ ಸಹಾಯಕ ಪ್ರಾಧ್ಯಾಪಕಿ ಡಾ.ಅಕ್ಷತಾ ಕೆ., ಸಂಶೋಧನಾ ವಿದ್ಯಾರ್ಥಿನಿ ವರ್ಷಾ ಶೆಟ್ಟಿ ಸಹಕರಿಸಿದರು.






