ದೈನಂದಿನ ಬದುಕಿನಲ್ಲಿ ಕನ್ನಡವನ್ನೇ ಹೆಚ್ಚೆಚ್ಚು ಬಳಸಿ: ಎಸಿ ಮಹೇಶ್
ಕುಂದಾಪುರ ತಾಲ್ಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆ

ಕುಂದಾಪುರ, ನ.1: ಕನ್ನಡ ಎನ್ನುವುದು ನಮ್ಮ ಅಸ್ಮಿತೆ. ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಾಗದೇ, ನಿತ್ಯ ನಿರಂತರವಾಗಿರಬೇಕು. ದೈನಂದಿನ ಬದುಕಿನಲ್ಲಿ ಕನ್ನಡವನ್ನೇ ಹೆಚ್ಚೆಚ್ಚು ಬಳಸಿ ನಾವೆಲ್ಲ ನಾಡು- ನುಡಿ- ಜಲ ರಕ್ಷಣೆಗೆ ಶ್ರಮಿಸಬೇಕು ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಮಹೇಶ್ ಪಿ.ಎಸ್. ಹೇಳಿದ್ದಾರೆ.
ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ರವಿವಾರ ನಡೆದ ಕನ್ನಡ ರಾಜ್ಯೋತ್ಸವದ ಆಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತಿದ್ದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ ಮಾತನಾಡಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ವೃತ್ತ ನಿರೀಕ್ಷಕ ಜಯರಾಮ ಗೌಡ, ಗ್ರೇಡ್ -2 ತಹಶಿಲ್ದಾರ್ ವಸಂತ್, ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಉಪತಹಶಿಲ್ದಾರ್ ವಿನಯ್, ಪುರಸಭೆ ಮಾಜಿ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಭಾಕರ ವಿ., ಮಾಜಿ ಸದಸ್ಯರಾದ ಶ್ರೀಧರ್ ಶೇರಿಗಾರ್, ಚಂದ್ರಶೇಖರ್ ಖಾರ್ವಿ, ತಾಲೂಕು ಮಟ್ಟದ ಅಧಿಕಾರಿಗಳಾದ ಆಶಾದೇವಿ ನಾಯಕ್, ರಮೇಶ್ ಕುಲಾಲ್, ಸತ್ಯನಾರಾಯಣ ಬಾಡ, ಪಿಎಸ್ಐಗಳಾದ ಅನೂಪ್ ನಾಯಕ್, ಪುಷ್ಪಾ, ಸುಧಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಗೌರವ ರಕ್ಷೆ ಸ್ವೀಕಾರ ನಡೆಯಿತು. ನಗರ ಠಾಣಾ ಉಪನಿರೀಕ್ಷಕ ನಂಜಾ ನಾಯ್ಕ್ ಕನ್ನಡದಲ್ಲೇ ಪಥಸಂಚಲನಕ್ಕೆ ಅನುಮತಿ ಕೇಳಿದರು. ಪೊಲೀಸರು, ವಿವಿಧ ಶಾಲಾ-ಕಾಲೇಜುಗಳ ಎನ್ಸಿಸಿ, ರೋವರ್ಸ್- ರೇಂಜರ್ಸ್, ಸ್ಕೌಟ್- ಗೈಡ್ಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ಗಮನಸೆಳೆಯಿತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.






