ವಕೀಲರ ಮೇಲಿನ ಹಲ್ಲೆ ಖಂಡಿಸಿ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಉಡುಪಿ, ನ.3: ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಇಂದು ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎದುರು ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ವಕೀಲರ ಮೇಲಿನ ಹಲ್ಲೆ ಪ್ರಕರಣಗಳ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿ ಬಳಿಕ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಹಾಗೂ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷ ದೇವದಾಸ ಶೆಟ್ಟಿಗಾರ್, ವಕೀಲರಾದ ಪ್ರೇಮ್ ಪ್ರಸಾದ್ ಶೆಟ್ಟಿ, ಆನಂದ ಮಡಿವಾಳ, ಅಖಿಲ್ ಹೆಗ್ಡೆ, ಅಸದುಲ್ಲಾ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದಲ್ಲೂ ಪ್ರತಿಭಟನೆ: ರಾಜ್ಯದಲ್ಲಿ ವಕೀಲರ ಮೇಲಿನ ಹಲ್ಲೆ ಹಾಗೂ ರಕ್ಷಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಂದಾಪುರ ನ್ಯಾಯಾಲಯದಲ್ಲಿ ಒಂದು ದಿನ ಕಲಾಪಗಳನ್ನು ಬಹಿಷ್ಕರಿಸಿ ಕುಂದಾಪುರ ವಕೀಲರ ಸಂಘವು ಮಂಗಳವಾರ ಪ್ರತಿಭಟನೆ ನಡೆಸಿತು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಜೆ.ಶ್ರೀನಾಥ ರಾವ್, ಪ್ರಧಾನ ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ಹಿರಿಯ ನ್ಯಾಯವಾದಿ ಟಿ.ಬಿ.ಶೆಟ್ಟಿ ಮಾತನಾಡಿದರು. ಬಳಿಕ ನಗರದ ಕೋರ್ಟ್ ಆವರಣದಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತ ಮಹೇಶ್ ಪಿ.ಎಸ್. ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ ವಕೀಲರ ಸಂಘ ಮಾಜಿ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಕಾಳಾವರ ಉದಯ್ ಕುಮಾರ್ ಶೆಟ್ಟಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷೆ ಸುಮನಾ, ಜತೆ ಕಾರ್ಯದರ್ಶಿ ಚರಣ್ ರಾಜ್, ಕ್ರೀಡಾ ಕಾರ್ಯದರ್ಶಿ ಸಜನ್ ಎಂ.ಎಸ್., ಕೋಶಾಧಿಕಾರಿ ದಿವ್ಯಾ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಗುರುಪ್ರಸಾದ್ ಭಟ್, ನಾಗೇಂದ್ರ ಪೈ ಉಪಸ್ಥಿತರಿದ್ದರು.






