ಬೈಲೂರು ವಾರ್ಡಿನ ರಸ್ತೆ ಡಾಮರೀಕರಣಕ್ಕೆ ಆಗ್ರಹಿಸಿ ಮನವಿ

ಉಡುಪಿ, ನ.3: ಉಡುಪಿ ನಗರಸಭೆ ವ್ಯಾಪ್ತಿಯ 31ನೇ ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದ ಮುಖ್ಯ ರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ತನಕ ರಸ್ತೆಯನ್ನು ಸಂಪೂರ್ಣ ಡಾಮರೀಕರಣ ಗೊಳಿಸುವಂತೆ ಆಗ್ರಹಿಸಿ ಬೈಲೂರು ವಾರ್ಡಿನ ಮಾಜಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ಉಡುಪಿ ನಗರ ಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
31ನೇ ಬೈಲೂರು ವಾರ್ಡಿನ ಶ್ರೀನಿವಾಸ ದೇವಸ್ಥಾನದಿಂದ ಪಿ.ಪಿ.ಸಿ ಕಾಲೇಜಿನ ಕಡೆ ಸಾಗುವ ಮುಖ್ಯ ರಸ್ತೆಯಲ್ಲಿ ರುವ ಒಳಚರಂಡಿ ಪೈಪ್‌ಲೈನ್ ಸಣ್ಣ ಗಾತ್ರದಲ್ಲಿದ್ದ ಕಾರಣದಿಂದಾಗಿ ಕಳೆದ 13 ವರ್ಷಗಳಿಂದ ನಿರಂತರವಾಗಿ ಒಳಚರಂಡಿಯಿಂದ ಕೊಳಚೆ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದ್ದ ಕಾರಣ ನಗರಸಭೆಯಿಂದ 97 ಲಕ್ಷ ರೂ. ಅನುದಾನದಲ್ಲಿ ಒಳಚರಂಡಿಯ ದೊಡ್ಡ ಗಾತ್ರದ ಪೈಪ್‌ಲೈನ್ ಹಾಗೂ ರಸ್ತೆಯ ಸಂಪೂರ್ಣ ಪೆವರ್ ಫಿನಿಷ್ ಮಾದರಿಯಲ್ಲಿ ಡಾಮರೀಕರಣ ಮಾಡಲು ಮೀಸಲಿಡಲಾಗಿತ್ತು.
ಒಳಚರಂಡಿಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು ಪಿ.ಪಿ.ಸಿ ಕಾಲೇಜಿನ ಕಡೆ ಸಾಗುವ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಡೆ ಸಿಕ್ಕಿದ್ದು ಈ ಪ್ರದೇಶದಲ್ಲಿ ವಸತಿಗಳಿದ್ದ ಕಾರಣ ಬ್ಲಾಸ್ಟಿಂಗ್ ಮಾಡಲು ಅಸಾಧ್ಯವಾಗಿದೆ. ಆದುದರಿಂದ ಮೆಷಿನ್ ಕಟ್ಟಿಂಗ್ ಮೂಲಕ ಮಳೆಗಾಲದಲ್ಲಿ ಬಂಡೆಗಳನ್ನು ಕೊರೆಯಲು ಹಲವು ಸಮಯ ಬೇಕಾದ ಕಾರಣದಿಂದಾಗಿ ಈ ಕಾಮಗಾರಿ ವಿಳಂಬವಾಗಿತ್ತು.
ಈಗಾಗಲೇ ಡಾಮರ್ ಪ್ಲಾಂಟ್‌ಗಳು ಪುನಾರಂಭಗೊಂಡಿದ್ದು ಅತೀ ಶೀಘ್ರದಲ್ಲಿ ಈ ಕಾಮಗಾರಿಯನ್ನು ಸಂಪೂರ್ಣ ಗೊಳಿಸಲು ಮುತುವರ್ಜಿ ವಹಿಸಬೇಕು. ಈ ಕಾಮಗಾರಿ ವಿಳಂಬವಾದ ಕಾರಣದಿಂದ ಸ್ಥಳೀಯರಿಗೆ ಮತ್ತು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದುದರಿಂದ ತಕ್ಷಣವೇ ಈ ಡಾಮರೀಕರಣ ಕಾಮಗಾರಿ ಯನ್ನು ಪೂರ್ಣಗೊಳಿಸಿ ರಸ್ತೆಯಲ್ಲಿ ಪ್ರಯಾಣಿಸಲು ಮುಕ್ತ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಮಾಜಿ ಸದಸ್ಯರಾದ ವಿಜಯ ಪೂಜಾರಿ, ಮೊಹಮ್ಮದ್, ಗಣೇಶ್ ನೆರ್ಗಿ, ಪ್ರಮುಖರಾದ ಚಂದ್ರ ಮೋಹನ್ ಚಿಟ್ಪಾಡಿ, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಮೊಹಮ್ಮದ್ ಶೀಶ್, ಸ್ಥಳೀಯರಾದ ಮ್ಯಾಕ್ಸಿಮ್ ಡಿಸೋಜ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್, ಶಹನವಾಜ್, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ್ ಆಚಾರ್ಯ, ಪ್ರಜ್ವಲ್ ಮೊದಲಾದವರು ಉಪಸ್ಥಿತರಿದ್ದರು.






