ಮುಸ್ಲಿಂ ಬಾಂಧವ್ಯ ವೇದಿಕೆ - ಅಹಿಂದ ನಾಯಕರ ಸಮಾಲೋಚನಾ ಸಭೆ

ಉಡುಪಿ, ನ.4: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆ ಮತ್ತು ಅಹಿಂದ ಚಳುವಳಿಯ ಪ್ರಮುಖ ನಾಯಕರ ನಡುವೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ಸಮಾಲೋಚನಾ ಸಭೆ ನಡೆಯಿತು.
ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಹಿಂದ ಚಳುವಳಿಯ ಭಾಗವಾಗಿ ನಡೆಯುವ ಬೃಹತ್ ಅಲ್ಪಸಂಖ್ಯಾತರ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆದ ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ದೇಶ ಮತ್ತು ರಾಜ್ಯದ ರಾಜಕೀಯ ನಾಯಕರ ಮುಂದೆ ಸಮರ್ಥವಾಗಿ ಮಂಡಿಸಲು ಬೇಕಾದ ವಿಚಾರಗಳ ಕುರಿತು ಗಂಭೀರವಾಗಿ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯ ಮಾಧ್ಯಮ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಮಾತನಾಡಿ, ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರವು ಇಡೀ ರಾಜ್ಯದ ಇತರ ಸಮುದಾಯಗಳ ಪಾಲಿಗೆ ನುಡಿದಂತೆ ನಡೆದ ಸರಕಾರವಾಗಿರುವುದು ಸತ್ಯ. ಆದರೆ ಮುಸ್ಲಿಮರ ಪಾಲಿಗೆ ಆ ನಿರೀಕ್ಷೆ ಸುಳ್ಳಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡಿದವರು ಮುಸ್ಲಿಮರು. ಹೀಗಿದ್ದರೂ ಪ್ರಣಾಳಿಕೆಯಲ್ಲಿ ಮಾಡಿದ ವಾಗ್ದಾನದಂತೆ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಬಹುತೇಕ ಬೇಡಿಕೆಗಳತ್ತ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಬೊಮ್ಮಾಯಿ ಸರಕಾರ ರದ್ದು ಮಾಡಿದ 2ಬಿ ಮೀಸಲಾತಿ ವಿಚಾರದಲ್ಲೂ ಕೂಡ ನಿರಂತರ ಮನವಿಯ ಹೊರತಾ ಗಿಯೂ ಸರಕಾರ ಮುಸ್ಲಿಮರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಮುಸ್ಲಿಮರ ಈ ಅಗತ್ಯವಾದ ಬೇಡಿಕೆಯನ್ನು ಈಡೇರಿಸಲು ಮತ್ತು ಸರಕಾರಕ್ಕೆ ಮನವರಿಕೆ ಮಾಡಲು ಅಹಿಂದ ಚಳುವಳಿಯ ನಾಯಕರು ಮುಸ್ಲಿಂ ಸಮುದಾ ಯಕ್ಕೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಅಹಿಂದ ಚಳುವಳಿಯ ನಾಯಕ ವೆಂಕಟೇಶ್ ಗೌಡ ಮಾತನಾಡಿ, ರಾಜ್ಯದಲ್ಲಿ ರಾಜಕೀಯ ಮತ್ತು ಆರ್ಥಿಕ ನೆಲೆಯಲ್ಲಿ ಸಮುದಾಯವಾರು ಅವಕಾಶ- ಸೌಲಭ್ಯ ಪಡೆದ ವಿವರಗಳನ್ನು ನೀಡಿದರು. ಭವಿಷ್ಯದ ದಿನಗಳಲ್ಲಿ ಮುಸ್ಲಿಂ ಸಮುದಾಯದ ಎಲ್ಲ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಮುಸ್ಲಿಮರೊಂದಿಗೆ ಸಹಕರಿಸುವ ಭರವಸೆಯನ್ನು ನೀಡಿದರು.
ಸಭೆಯಲ್ಲಿ ಅಹಿಂದ ಚಳುವಳಿಯ ನೇತಾರರಾದ ತೀ.ನಾ.ಶ್ರೀನಿವಾಸ್, ನಿವೃತ್ತ ಡಿವೈಎಸ್‌ಪಿ ಸುರೇಂದ್ರ, ರಿಚರ್ಡ್ ಬೈಬೀರಿಯೋ, ಸುನಿಲ್ ವಿ.ಜಾಕೋಬ್, ಸಿರಾಜ್ ಬಜ್ಪೆ, ಮುಸ್ಲಿಂ ಬಾಂಧವ್ಯ ವೇದಿಕೆ ಅಧ್ಯಕ್ಷ ಝಾಕಿರ್ ಹುಸೇನ್, ಕಾರ್ಯದರ್ಶಿ ರೆಹಮತ್ ದಾವಣಗೆರೆ, ಇಬ್ರಾಹಿಂ ನಡುಪದವು, ಕೋಟಾ ಇಬ್ರಾಹಿಂ ಸಾಹೇಬ್, ಖಲೀಲ್ ತಲಪಾಡಿ, ಎಸ್.ಕೆ.ಇಬ್ರಾಹಿಂ, ಮೌಲಾನಾ ಹಫೀಜ್ ಕಾಸ್ಮಿ, ಮೌಲಾನಾ ಝಮೀರ್ ಅಹ್ಮದ್ ರಶಾದಿ, ರಫೀಕ್ ನಾಗೂರು, ಅಶ್ರಫ್ ಕುಂದಾಪುರ, ಪರ್ವೇಜ್ ತೀರ್ಥಹಳ್ಳಿ, ಅಸ್ಲಾಂ ಪಾಷಾ ನ್ಯಾಮತಿ, ಪೀರೂ ಸಾಹೇಬ್, ಝಫ್ರುಲ್ಲಾ ಹೂಡೆ, ಉಸ್ಮಾನ್ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.






