ಉದ್ಯಮಿ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ತನಿಖೆ

ಉಡುಪಿ, ನ.4: ಉದ್ಯಮಿ ಮುದರಂಗಡಿಯ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣದ ಬಂಧಿತ ಎಲ್ಲ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ತನಿಖೆ ಕೈಗೊಳ್ಳಲಾಗಿದ್ದು, ಈ ಸಂಬಂಧ ಆರೋಪಿಗಳನ್ನು ಹಾಗೂ ಸಂಪೂರ್ಣ ಕಡತವನ್ನು ಮೈಸೂರಿನ ವಿಶೇಷ ಕೋಕಾ ನ್ಯಾಯಾ ಲಯಕ್ಕೆ ಹಸ್ತಾಂತರಿಸಲಾಗಿದೆ.
ಆ.7ರಂದು ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಬೈಕಿನಲ್ಲಿ ಬಂದ ಆರೋಪಿಗಳು ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಉತ್ತರ ಪ್ರದೇಶದ ರಾಜು ಫಾಜಿ ಸುಭೋದ್, ಉತ್ತರಖಾಂಡದ ಅನ್ಮೋಲ್ ರಸ್ತೋಗಿ, ಬಿಹಾರದ ಜಿಯಾಹುಲ್ ವಜೂಲ್ ಶೇಖ್, ಎರ್ಮಾಳಿನ ಚಿರಾಗ್ ಪೂಜಾರಿ, ಮಹಮ್ಮದ್ ಇರ್ಷಾದ್, ಸದಾನಂದ ದೇವಾಡಿಗ ಅದಮಾರಿನ ಕಿಶೋರ್ ರಾಮ ಪೂಜಾರಿ, ಬಿಹಾರದ ಸೂರಜ್ ಕುಮಾರ್, ಬೈಂದೂರಿನ ಲೊಕೇಶ ತೇಜ ಕೊಠಾರಿ, ಬಿಹಾರದ ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಎಂಬ ವರನ್ನು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಭೂಗತ ಪಾತಕಿ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣದ ಎಲ್ಲ ಆರೋಪಿಗಳು ಹೇಮಂತ್ ಪೂಜಾರಿ, ಅನೂಜ್ ಕುಮಾರ್ ಹಾಗೂ ಕಿಶೋರ್ ಪೂಜಾರಿ ಅವರೊಂದಿಗೆ ಸೇರಿಕೊಂಡು ಸಂಘಟಿತ ಅಪರಾಧ ಮಾಡಿರುವುದು ಪ್ರಕರಣದ ತನಿಖೆಯಲ್ಲಿ ಕಂಡು ಬಂದಿದ್ದು, ಅದರಂತೆ ತನಿಖಾಧಿಕಾರಿ ಈ ಪ್ರಕರಣದಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಯನ್ನು ಅಳವಡಿಸಿ ಕೊಳ್ಳಲು ಅನುಮತಿ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮುಖಾಂತರ ಕೋರಿಕೆ ಪತ್ರ ಮನವಿ ಮಾಡಿದ್ದರು.
ಆ ಹಿನ್ನೆಲೆಯಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅವರು ಭೂಗತ ಪಾತಕಿ ಹೇಮಂತ್ ಪೂಜಾರಿ, ಅನುಜ್ ಕುಮಾರ್ ಹಾಗೂ ಇವರ ಸಹಚರರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ತನಿಖೆ ಕೈಗೊಳ್ಳುವಂತೆ ಅನುಮತಿ ನೀಡಿದ್ದು, ಪ್ರಕರಣದ ಆರೋಪಿಗಳನ್ನು ಹಾಗೂ ಸಂಪೂರ್ಣ ಕಡತವನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮುಂದಿನ ತನಿಖಾಧಿಕಾರಿಯಾಗಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರನ್ನು ನೇಮಿಸಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.






