ಕೋಡಿ ಸೇತುವೆಯಿಂದ ನದಿಗೆ ಕಸ ಎಸೆಯುವುದಕ್ಕೆ ಕಡಿವಾಣ: ನಾಗರಿಕರ ಆಗ್ರಹ

ಕುಂದಾಪುರ, ನ.4: ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ಬೀಚ್ ಸಂಪರ್ಕಿಸುವ ಸೇತುವೆಯಿಂದ ಕೆಳಕ್ಕೆ ಪಂಚ ಗಂಗಾವಳಿ ನದಿಗೆ ವಾಹನಗಳಲ್ಲಿ ಬಂದು ತ್ಯಾಜ್ಯ ಎಸೆಯುತ್ತಿರುವುದು ಅವ್ಯಾಹತವಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಪಂಚಗಂಗಾವಳಿ ನದಿಗೆ ನಿರ್ಮಿಸಿರುವ ಕೋಡಿ ಸಂಪರ್ಕಿಸುವ ಈ ಸೇತುವೆಯಲ್ಲಿ ಕಸ ಎಸೆಯಲಾಗುತ್ತಿದ್ದು ಇದರಿಂದ ತ್ಯಾಜ್ಯ ನದಿ ನೀರಿನೊಂದಿಗೆ ಸೇರಿ ಮಲೀನವಾಗುತ್ತಿದೆ. ಈ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದ್ದು, ಇದನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ.
ರಾತ್ರಿ ವೇಳೆ ಇಲ್ಲಿಗೆ ಕಾರು, ಬೈಕ್‌ಗಳಲ್ಲಿ ಎಲ್ಲಿಂದಲೋ ಬಂದು ಸೇತುವೆಯ ಮೇಲೆ ನಿಂತು ನದಿಗೆ ಕಸ ಎಸೆದು ಹೋಗುತ್ತಿದ್ದಾರೆ. ಇವರು ಯಾರೂ ಕೂಡ ಸ್ಥಳೀಯರಲ್ಲ. ಬಹುತೇಕ ಎಲ್ಲರೂ ಹೊರಗಿನವರೇ ಆಗಿದ್ದಾರೆ. ಇನ್ನು ಕೆಲವು ಮಾಂಸದ ಅಂಗಡಿಯವರು ಕೂಡ ಕೋಳಿ ತ್ಯಾಜ್ಯಗಳನ್ನು ಕೂಡ ಚೀಲದಲ್ಲಿ ಕಟ್ಟಿಕೊಂಡು ಬಂದು ಇಲ್ಲಿ ಎಸೆದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಸೇತುವೆ ಹತ್ತಿರವೇ ಕಸ ಎಸೆಯದಂತೆ ಎಚ್ಚರಿಕೆ ಫಲಕ ಇದ್ದರೂ, ಅದರ ಕೆಳಗೆಯೇ ಕಸದ ರಾಶಿ ಹಾಕಲಾಗಿದೆ. ಇದಕ್ಕೆ ಕೂಡಲೇ ಸಂಬಂಧಪಟ್ಟ ಪುರಸಭೆಯವರು ಕಡಿವಾಣ ಹಾಕಬೇಕು, ಕಸ ಎಸೆಯುವವರನ್ನು ಪತ್ತೆ ಹಚ್ಚಿ, ಭಾರೀ ದಂಡ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಡಿ ಸೇತುವೆ ಪರಿಸರದಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಸಹಿತ ನದಿಗೆ ಕಸ ಎಸೆಯುವುದನ್ನು ತಡೆಯುವ ಉದ್ದೇಶ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸುಮಾರು 3-4 ವರ್ಷದ ಹಿಂದೆ ಇಲ್ಲಿ ಪುರಸಭೆ ವತಿ ಯಿಂದ ಅಂಕದಕಟ್ಟೆಯ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿಟಿವಿ ಅಳವಡಿಸಲಾಗಿತ್ತು. ಆದರೆ ಪುರಸಭೆಯವರು 1 ವರ್ಷದ ನಿರ್ವಹಣೆ ಬಿಲ್ ಪಾವತಿಸಲು ಬಾಕಿ ಇಟ್ಟಿರುವುದರಿಂದ ಕಳೆದ 3 ವರ್ಷದಿಂದ ಹೊರೆಯಾಗುತ್ತಿರುವು ದರಿಂದ ಆ ಸಂಸ್ಥೆಯವರು ಸಂಪರ್ಕ ಕಡಿತಗೊಳಿಸಿ ದ್ದಾರೆ. ಪುರಸಭೆಯವರು ಬಾಕಿ ಹಣ ಪಾವತಿಸಿದರೆ ಮತ್ತೆ ಸಿಸಿಟಿವಿ ಸಂಪರ್ಕ ಕಲ್ಪಿಸಲಾಗುವುದು ಎಂದು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯವರು ತಿಳಿಸಿದ್ದಾರೆ.
ಪಂಚಗಂಗಾವಳಿ ಮಲೀನ
ಸೇತುವೆ ಮೇಲಿನಿಂದ ಕಸ ಎಸೆಯುವುದರ ಪರಿಣಾಮ ಸೌಪರ್ಣಿಕಾ, ವಾರಾಹಿ, ಕೇದಕ, ಚಕ್ರಾ ಮತ್ತು ಕುಬ್ಜಾ ಎಂಬ ಐದು ನದಿಗಳು ಸೇರಿ ಪಂಚಗಂಗಾವಳಿ ನದಿಯ ಪರಿಸರ ಮಲೀನಗೊಳ್ಳುತ್ತಿದೆ.
ಅಪಾರ ಪ್ರಮಾಣದ ಜಲಚರ ಜೀವಿಗಳಿಗೂ ಅಪಾಯ ಎದುರಾಗುತ್ತಿದೆ. ಇಲ್ಲಿ ವಿವಿಧ ಜಾತಿಯ ಮೀನುಗಳು, ಕೆಸರು ಏಡಿಗಳು, ವಿವಿಧ ಪ್ರಬೇಧದ ಸಿಗಡಿಗಳು ಇದೆ. ಕಪ್ಪೆ ಚಿಪ್ಪುಗಳು ಕೂಡ ಇಲ್ಲಿವೆ. ಇನ್ನು ಈ ಮೀನುಗಳನ್ನು ಆಹಾರವಾಗಿ ಆಶ್ರಯಿಸಿರುವ ವಲಸೆ ಹಕ್ಕಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ಆದ್ದರಿಂದಬೀ ಪರಿಸರವನ್ನು ಸ್ವಚ್ಛವಾಗಿಡಬೇಕಿದೆ ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
‘ಕೋಡಿ ಸೇತುವೆ ಮೇಲಿನಿಂದ ರಾತ್ರಿ ವೇಳೆ ವಾಹನಗಳಲ್ಲಿ ಬಂದು ಅನೇಕ ಮಂದಿ ಕಸ ಎಸೆದು ಹೋಗುತ್ತಿದ್ದಾರೆ. ದೊಡ್ಡ ದೊಡ್ಡ ಚೀಲದಲ್ಲಿ ಕೋಳಿ ತ್ಯಾಜ್ಯ ಕೂಡ ತಂದು ಹಾಕುತ್ತಿದ್ದು ಸಂಬಂಧಿತ ಪುರಸಭೆಯವರು ಕಡಿವಾಣ ಹಾಕಬೇಕು. ಇಲ್ಲಿನ ಅಕ್ರಮ ಚಟುವಟಿಕೆ ನಡೆಯುದಂತೆ, ಕಸ ಎಸೆಯದಂತೆ ತಡೆಯಲು ಮೊದಲಿದ್ದಂತೆ ಸಿಸಿಟಿವಿಗಳನ್ನು ಅಳವಡಿಸಬೇಕು. ಕಸ ಎಸೆದವರಿಗೆ ದಂಡ ವಿಧಿಸಬೇಕು’
- ವಿಜಯ ಎಸ್. ಪೂಜಾರಿ, ಮಾಜಿ ಅಧ್ಯಕ್ಷ, ನಗರ ಯೋಜನಾ ಪ್ರಾಧಿಕಾರ, ಕುಂದಾಪುರ
‘ಕಸ ಎಸೆಯುವುದಕ್ಕೆ ಎಚ್ಚರಿಕೆ ಫಲಕ ಸಹಿತ, ಇನ್ನಿತರ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಕೂಡ ಯಾರಾದರೂ ಇಲ್ಲಿ ಕಸ ಎಸೆಯುವುದು ಕಂಡರೆ ಅದರ ಫೋಟೋ ಅಥವಾ ವಿಡಿಯೋ ನೀಡಿ, ಸಹಕರಿಸಿ. ಮಾಹಿತಿ ನೀಡಿದವರ ಮಾಹಿತಿ ಗೌಪ್ಯವಾಗಿಡಲಾಗುವುದು. ಕಸ ಎಸೆದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು’
-ಗುರುಪ್ರಸಾದ್ ಶೆಟ್ಟಿ, ಪರಿಸರ ಅಭಿಯಂತರರು, ಕುಂದಾಪುರ ಪುರಸಭೆ






