ಕರ್ನಾಟಕವನ್ನು ಬೆಸೆಯುವ ಭಾಷೆ ಕನ್ನಡ: ಪ್ರಮೋದ್ ಮಧ್ವರಾಜ್

ಕುಂದಾಪುರ, ನ.4: ಕನ್ನಡ ಕರ್ನಾಟಕವನ್ನು ಬೆಸೆಯುವ ಭಾಷೆ. ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾಡಿನ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕುಂದಾಪುರ ಬೋರ್ಡ್ ಹೈಸ್ಕೂಲ್‌ನ ಕಲಾಮಂದಿರದಲ್ಲಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ನ ಪ್ರಸ್ತುತಿಯಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಳು ಭಾಷೆಯ ಪ್ರಭಾವದ ನಡುವೆಯೂ ಕಲಾಕ್ಷೇತ್ರ ಕುಂದಾಪುರ ಕನ್ನಡದ ಸೇವೆ ಮಾಡುತ್ತಿದೆ. ಇದು ಶ್ಲಾಘನೀಯ ಕಾರ್ಯ. ಸಂಸ್ಥೆಯ ಈ ಕಾರ್ಯ ನಿರಂತರವಾಗಿ ಮುಂದುವ ರಿಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳಿಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆಸಕ್ತಿ ಬೆಳೆಸಲು ಪೂರಕ ವಾತಾವರಣ ನಿರ್ಮಿಸುವ ಕೆಲಸ ಸಂಸ್ಥೆಯಿಂದ ನಡೆಯುತ್ತಿದೆ. ಸಂಸ್ಥೆಯ ಸಾಹಿತ್ಯಕ ಸೇವೆ ಇನ್ನಷ್ಟು ವಿಸ್ತಾರವಾಗಲಿ. ಇಲಾಖೆಯ ಸಹಕಾರ ಸದಾ ಇರಲಿದೆ ಎಂದರು.
ಸಾಹಿತಿ, ಚಿಂತಕ ನಾಗತಿಹಳ್ಳಿ ರಮೇಶ್ ಮಾತನಾಡಿ, ಇಂದಿನ ರಾಜಕಾರಣದಲ್ಲಿ ಜಾತಿ, ದುಡ್ಡು, ಹೆಂಡದ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯೋತ್ಸವವು ಕೇವಲ ಆಚರಣೆಯಾಗದೆ ಅರಿವಿನ ಹಬ್ಬವಾಗಬೇಕು. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗ ಪುನಶ್ಚೇತನಗೊಳ್ಳುವ ಅಗತ್ಯವಿದೆ. ಪ್ರತಿಯೊಬ್ಬರು ಹುಟ್ಟು ಮತ್ತು ಸಾವಿನ ನಡುವಿನ ಬದುಕಿನಲ್ಲಿ ಒಳಿತಿನ ಬೀಜ ಬಿತ್ತಿ ಹೋಗಬೇಕು ಎಂದರು.
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕುಂದಾಪುರ ರೋಟರಿ ಕ್ಲಬ್ನ ಸತೀಶ್ ಹೆಗ್ಡೆ ವಹಿಸಿದ್ದರು. ಭಾರತೀಯ ಸ್ಟೇಟ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಮುರುಳೀಧರ ಉಪಸ್ಥಿತರಿದ್ದರು. ಸುಮಲತಾ ಶೆಟ್ಟಿ ನಿರೂಪಿಸಿ, ರಾಮಚಂದ್ರ ವಂದಿಸಿದರು.
ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಕಲಾಕ್ಷೇತ್ರ ಕುಂದಾಪುರದ ಗೀತಗಾಯನ ತಂಡದಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ಬಳಿಕ ಕುಂದಾಪುರದ ಹವ್ಯಾಸಿ ಕಲಾವಿದರಿಂದ ’ಶಾಂತಿಧಾಮ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.






